

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಸುಕ್ಷೇತ್ರ ಮಾಲೆಕಲ್ಲು ಅಮರಗಿರಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರ ವಿಶೇಷ ಪೂಜೆ ನೆರವೇರಿತು.
ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಲಕ್ಷ್ಮೀ ಸಮೇತದ ಗೋವಿಂದರಾಜಸ್ವಾಮಿಗೆ ಪೂಜೆ ಸಲ್ಲಿಸಿದರು. ಇನ್ನೂ ಕೆಲ ಭಕ್ತರು ಕಡಿದಾದ ಬೆಟ್ಟವನ್ನೇರಿ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತ ವೆಂಕಟರಮಣ ಸ್ವಾಮಿಯ ದರ್ಶನ ಮಾಡಿ ಪುನೀತರಾದರು.
ದೇವಾಲಯ ಆವರಣದಲ್ಲಿರುವ ಸೂರ್ಯನಾರಾಯಣ, ಆಂಜನೇಯ, ಕೆಂಚರಾಯಸ್ವಾಮಿ ಹಾಗೂ ಬೆಟ್ಟದ ತಪಲಿನಲ್ಲಿರುವ ಗುಂಡಮ್ಮ ದೇವಾಲಯದಲ್ಲೂ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತು. ಮಹಾಮಂಗಳಾರತಿ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಸ್ಥಾನದ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.