

ಜಮಖಂಡಿ: ಧರ್ಮದ ಆಚರಣೆ, ಆರೋಗ್ಯ ರಕ್ಷಣೆಯ ಅರಿವು ಹಾಗೂ ಆಧ್ಯಾತ್ಮಿಕ ಚಿಂತನೆ ಕುರಿತು ಜಾಗೃತಿ ಮೂಡಿಸಲು ಶ್ರಾವಣ ಮಾಸದ ನಿಮಿತ್ತ ನಗರದ ವಿವಿಧ ಓಣಿಗಳಲ್ಲಿ ಓಲೆಮಠದ ಆಶ್ರಯದಲ್ಲಿ ಜು.25 ರಿಂದ ಆ.20 ರವರೆಗೆ ವಚನ ಶ್ರಾವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಓಲೆಮಠದ ಆನಂದ ದೇವರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ವಚನ ಶ್ರಾವಣ ಕಾರ್ಯಕ್ರಮದ ಕುರಿತು ಶ್ರೀ ಮಠದ ಸಭಾಂಗಣದಲ್ಲಿ ಭಾನುವಾರ ಸಂಜೆ ಕರೆದಿದ್ದ ಸದ್ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜು. 25 ರಿಂದ ಆ.20 ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ಕಾರ್ಯಕ್ರಮಗಳು ದಿನಕ್ಕೊಂದು ಓಣಿಯಲ್ಲಿ ಆರಂಭವಾಗುತ್ತವೆ. ಸಂಜೆ 6.30 ರಿಂದ ಸಂಗೀತ ಸೇವೆ, 7 ಗಂಟೆಯಿಂದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ 7.30 ರಿಂದ ಶ್ರೀಗಳಿಂದ ಪ್ರವಚನ ನಡೆಯಲಿವೆ ಎಂದರು.
ಆಸ್ತಿ, ಅಂತಸ್ತು, ಹಣ, ಚಿನ್ನ-ಬೆಳ್ಳಿ ಇವು ನಿಜವಾದ ಸಂಪತ್ತು ಅಲ್ಲ. ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಒಳ್ಳೆಯ ವಿಚಾರದ ಮಾತುಗಳು ನಿಜವಾದ ಸಂಪತ್ತು. ಆದ್ದರಿಂದ ಬಸವಾದಿ ಶಿವಶರಣರ ವಚನಗಳನ್ನು ಆಧರಿಸಿ ಒಳ್ಳೆಯ ವಿಚಾರಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಓಲೆಮಠದ ಆವರಣದಲ್ಲಿ ಮಾತ್ರ ಭಕ್ತಿಯ ವಾತಾವರಣ ನಿರ್ಮಿಸುವ ಬದಲಾಗಿ ಓಣಿ ಓಣಿಯಲ್ಲಿ ಶ್ರೀಮಠದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಓಣಿ ಓಣಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಹಾಗಾಗಿ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ ನೀಡಿ ಸನ್ನಡತೆಯತ್ತ ಅವರ ಮನ ಪರಿವರ್ತನೆ ಮಾಡುವುದು ವಚನ ಶ್ರಾವಣ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಆಶೀರ್ವಚನ ನೀಡಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಹೃದಯರೋಗ ತಜ್ಞ ಡಾ. ಎಚ್.ಜಿ. ದಡ್ಡಿ, ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ನಗರಸಭೆ ಸದಸ್ಯ ಸಿದ್ದು ಮೀಶಿ, ನಿವೃತ್ತ ಶಿಕ್ಷಕ ಎಂ.ಡಿ. ಸಂಖ ಮಾತನಾಡಿ, ಸಲಹೆ ನೀಡಿದರು.
ಬಿ.ಎನ್. ಅಸ್ಕಿ ಪ್ರಾರ್ಥಿಸಿದರು, ಎಸ್.ವೈ. ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಸ್.ಎಚ್. ಮಠಪತಿ, ಬಸವರಾಜ ಬಳಗಾರ ನಿರೂಪಿಸಿದರು. ರುದ್ರಯ್ಯ ಕರಡಿ ವಂದಿಸಿದರು.