

ಹುಬ್ಬಳ್ಳಿ: ಪರಂಪರಾಗತವಾಗಿ ಬಂದಿರುವ ಹಬ್ಬಗಳು ಇಂದಿಗೂ ಬದುಕಿನ ಮೌಲ್ಯವನ್ನು ಸಾರುತ್ತವೆ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶೇಷತೆ ಇದ್ದು, ಅವು ಸಂಬಂಧಗಳನ್ನು ಬೆಸೆಯುವ ಕೊಂಡಿಗಳಾಗಿವೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಹೇಳಿದರು.
ಇಲ್ಲಿಯ ಭೈರಿದೇವರಕೊಪ್ಪದ ಕಲ್ಪತರು ನಿಲಯ ಸಭಾಭವನದಲ್ಲಿ ಉಣಕಲ್ಲಿನ ಸಾಯಿನಗರ ಸಾಯಿ ಮಹಿಳಾ ಮಂಡಳ ಮತ್ತು ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆಮನೆಯಲ್ಲಿ ಶ್ರಾವಣ ಜಾನಪದ ಮತ್ತು ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಹೇಳುವ ಕಾರ್ಯ ನಿರಂತರ ನಡೆಯಬೇಕು ಎಂದರು.
ಅತಿಥಿಗಳಾಗಿದ್ದ ವಿ.ಜಿ. ಪಾಟೀಲ ಮಾತನಾಡಿ, ನಮ್ಮ ಸಾಂಸ್ಕೃತಿಕ ಪರಂಪರೆಯು ಅತ್ಯಂತ ಮಹತ್ವದ್ದಾಗಿದ್ದು. ಅದು ಜಗತ್ತಿನಲ್ಲಿಯೇ ವಿಶೇಷವೆನಿಸಿದೆ. ಇಂತಹ ವೈವಿಧ್ಯಮಯ ಆಚರಣೆಗಳು ಜಗತ್ತಿನ ಮತ್ತ್ಯಾವ ದೇಶದಲ್ಲಿಯೂ ಕಾಣುವುದಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಯಿ ಮಹಿಳಾ ಮಂಡಳದ ಅಧ್ಯಕ್ಷೆ ಸುಮಿತ್ರಾ ಕುಂಬಾರ ಮಾತನಾಡಿ, ಬಳಗದ ವತಿಯಿಂದ ಇಂತಹ ಕಾರ್ಯಕ್ರಮ ಮಾಡಿದ್ದು, ನಮಗೆ ತುಂಬಾ ಖುಷಿ ಕೊಟ್ಟಿದೆ. ಬಡಮಕ್ಕಳೊಂದಿಗೆ ರಕ್ಷಾ ಬಂಧನ ಆಚರಣೆಯ ಸಂತಸ ಹಂಚಿಕೊಂಡಿರುವುದು ಮನಸ್ಸಿಗೆ ಆನಂದ ತಂದಿದೆ ಎಂದರು.
ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಅಧ್ಯಕ್ಷೆ ಜಯಶ್ರೀ ಗೌಳಿ ಅವರು, ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಡಾ. ರಾಮು ಮೂಲಗಿ ಶ್ರಾವಣ ಜಾನಪದ ಕುರಿತು ಹಾಡುಗಳನ್ನು ಹೇಳಿದರು. ಸುವರ್ಣ ಕಂಬಾಳೆ, ಜಯಶ್ರೀ ಕರಿಗುದರಿ, ನೀಲಾ ಶಿಗ್ಲಿ, ಲೀಲಾ ಬುಡ್ಡಿ, ಅರವಿಂದ ಚಿನ್ನಪ್ಪನವರ ಉಪಸ್ಥಿತರಿದ್ದರು.
ಸಾಯಿ ಮಹಿಳಾ ಮಂಡಳದ ಗೀತಾ ಅಂಗಡಿ ಮತ್ತು ಸೀತಲ್ ಅವರು ಪ್ರಾರ್ಥನೆ ಹಾಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ನದಾಫ ಎಚ್.ಎಚ್. ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಮಲಕನ್ನವರ ವಂದಿಸಿದರು. ವಿದ್ಯಾರ್ಥಿಗಳಿಗೆ ರಾಕಿ ಕಟ್ಟಿ ಎಲ್ಲರೊಂದಿಗೆ ಊಟ ಮಾಡಿ ಸಂಭ್ರಮಿಸಲಾಯಿತು.