ಕಾವೇರಿ ದೇಗುಲದಲ್ಲಿ ಶ್ರಾವಣ ಮಾಸದ ಪೂಜೆ

10adarshkdga6
ಶ್ರಾವಣ ಮಾಸ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಯನ್ನು ಹೂವಿನಿಂದ ಅಲಂಕರಿಸಿರುವುದು.
Published on

ಕುಶಾಲನಗರ: ಪಟ್ಟಣದ ಟೋಲ್ ಗೇಟ್‌ನಲ್ಲಿರುವ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಶ್ರಾವಣ ಮಾಸದ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ನೆರವೇರಿತು.

ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಜೇನು, ಎಳನೀರು, ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು. ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಬೆಳಗಲಾಯಿತು.

ಅರ್ಚಕ ಪುರುಷೋತ್ತಮ್ ಭಟ್ ಮಾತನಾಡಿ, ಕಾವೇರಿ ನದಿ ನೀರಿನ ಶುದ್ಧತೆ ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲಿದೆ. ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಿಕೊಂಡು ತ್ಯಾಜ್ಯ ನೀರು ನದಿಗೆ ಸೇರದಂತೆ ನೋಡಿಕೊಂಡರೆ ಅದು ನಾವು ಮಾಡುವ ಪುಣ್ಯಕಾರ್ಯದಲ್ಲಿ ಒಂದಾಗುತ್ತದೆ. ಪ್ರತಿಯೊಬ್ಬರೂ ನದಿಯ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಬಾರವಿ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಕಾವೇರಿ ನದಿ ನೀರನ್ನು ಸಹಸ್ರಾರು ಮಂದಿ ಕುಡಿಯುತ್ತಿದ್ದು, ಜನರು ತ್ಯಾಜ್ಯ ಎಸೆಯುವುದರಿಂದ ನೀರು ಮಲಿನವಾಗುತ್ತದೆ. ಸ್ವಚ್ಛ ಪರಿಸರ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ಬಾರವಿ ಕನ್ನಡ ಅಭಿಮಾನಿ ಸಂಘದ ಪ್ರಮುಖರಾದ ಬಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಸೋಮಶೇಖರ್, ತಿಲಕ್ ಪೂಜಾರಿ, ಚಂದ್ರು, ರುದ್ರ, ಮಂಜು, ಪ್ರಸಾದ್, ಬಸವೇಗೌಡ, ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net