

ವಿಜಯವಾಣಿ ವಿಶೇಷ ಚಿತ್ರದುರ್ಗ: ಕೋಟೆನಗರಿ ಶಕ್ತಿದೇವತೆಗಳ ನಾಡೆಂದು ಪ್ರಸಿದ್ಧಿ ಪಡೆದಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳಿಂದಲೂ ಹೆಸರಾಗಿದೆ.
ಈ ಅವಧಿಯಲ್ಲಿ ಸಾಮಾನ್ಯವಾಗಿ ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚು. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದರ್ಶನ ಪಡೆಯಲಿಕ್ಕಾಗಿ ಭಕ್ತರ ದಂಡೆ ದುರ್ಗಕ್ಕೆ ಹರಿದು ಬರುತ್ತದೆ…
ಪ್ರತಿ ವರ್ಷದಂತೆ ಜುಲೈ ತಿಂಗಳಲ್ಲೇ ಶ್ರಾವಣ ಮಾಸ ಆರಂಭವಾಗಬೇಕಿತ್ತು. ಆದರೆ, ಕೆಲವೊಮ್ಮೆ ಅಧಿಕ ಶ್ರಾವಣದ ಅಂಗವಾಗಿ ಈ ಬಾರಿ ಒಂದು ತಿಂಗಳು ತಡವಾಗಿದ್ದು, ಆ.17ರಿಂದ ಆರಂಭವಾಗುತ್ತಿದೆ. ಇದಕ್ಕಾಗಿ ದೇಗುಲಗಳು, ಮನೆಗಳನ್ನು ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಇಲ್ಲಿನ ನವದುರ್ಗೆಯರು, ಶಿವ, ಗಣಪತಿ, ವೆಂಕಟೇಶ್ವರ, ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಮಾಸದ ನಿತ್ಯ ಪೂಜೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಶ್ರಾವಣದ ಮೊದಲ ದಿನ ಶುಕ್ಲ ಪಕ್ಷ ಗುರುವಾರ ಬಂದಿರುವ ಕಾರಣ ಜಿಲ್ಲೆಯ ಪುಣ್ಯಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ಗುರುರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜ ಉತ್ಸವಾಂಬ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾ ಮಾತೆ ಒಳಗೊಂಡು ಎಲ್ಲ ಶಕ್ತಿದೇವತೆಗಳ ದೇಗುಲಗಳಲ್ಲಿ ವೈವಿಧ್ಯಮಯ ಅಲಂಕಾರ ಸೇವೆ, ಪೂಜೆ ನಡೆಸಲು ಭಕ್ತ ಮಂಡಳಿ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.
ತಮಟಕಲ್ಲು, ಬರಗೇರಿ, ಕೋಟೆ, ಕ್ರೀಡಾಂಗಣ ರಸ್ತೆ ಆಂಜನೇಯ, ರಕ್ಷಾಂಜನೇಯ, ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ, ಆನೆಬಾಗಿಲು ವೆಂಕಟೇಶ್ವರ ಸ್ವಾಮಿ, ಉಗ್ರನರಸಿಂಹಸ್ವಾಮಿ, ಲಕ್ಷ್ಮೀನರಸಿಂಹ ಸ್ವಾಮಿ ದೇಗುಲಗಳಲ್ಲಿ ಶನಿವಾರ ಪೂಜೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಶಿವ ದೇಗುಲಗಳು ಸಜ್ಜು: ಮಹಾರುದ್ರನ ಆರಾಧಕರಿಗೆ ಸೋಮವಾರ ಅತ್ಯಂತ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸದ ಎಲ್ಲ ಸೋಮವಾರದಂದು ಐತಿಹಾಸಿಕ ದೇಗುಲಗಳಾದ ಹಿಡಂಭೇಶ್ವರ, ಸಂಪಿಗೆ ಸಿದ್ಧೇಶ್ವರ, ಕಾಶಿ ವಿಶ್ವೇಶ್ವರ, ಪಲ್ಗುಣೇಶ್ವರ, ಕರ್ವತೀಶ್ವರ, ಗಾರೆಬಾಗಿಲು ಈಶ್ವರ, ಉಮಾ ಮಹೇಶ್ವರ, ನಗರದಲ್ಲಿನ ನೀಲಕಂಠೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸೇರಿ ಜಿಲ್ಲೆಯ ಶಿವನ ದೇಗುಲಗಳಲ್ಲಿ ಸ್ವಾಮಿಯ ಮೂರ್ತಿಗೆ ಜಲಾಭಿಷೇಕ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇವೆಗಳು ನೆರವೇರಲಿವೆ.
ಮೋದಕ ಪ್ರಿಯನಿಗೆ ವಿಶೇಷಾಲಂಕಾರ: ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ, ಜೆಸಿಆರ್ ಬಡಾವಣೆಯ ಗಣೇಶನ ಸನ್ನಿಧಿಯಲ್ಲೂ ಪ್ರತಿ ಮಂಗಳವಾರ ಮತ್ತು ಬುಧವಾರ ವಿಶೇಷಾಲಂಕಾರದೊಂದಿಗೆ ಪೂಜಾ ಕೈಂಕರ್ಯಗಳು ನಡೆಯಲಿವೆ.
ವ್ರತಾಚರಣೆ ಆರಂಭ: ಮಂಗಳ, ಶುಕ್ರ, ಸಂಪದ್ ಗೌರಿ ಒಳಗೊಂಡು ಈ ಮಾಸದಲ್ಲಿ ಹಿಂದು ಧರ್ಮದ ಅನೇಕ ಮಹಿಳೆಯರು ವ್ರತಾಚರಣೆ ಮಾಡುವ ಪ್ರತೀತಿ ಇದ್ದು, ಮನೆಗಳನ್ನು ಶುಚಿಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ.
ಚೌತಿ 20ಕ್ಕೆ, ಪಂಚಮಿ 21ಕ್ಕೆ: ಶ್ರಾವಣ ಆರಂಭದಲ್ಲೇ ಬರುವ ನಾಗರಚೌತಿ ಮತ್ತು ನಾಗರ ಪಂಚಮಿ ಹಬ್ಬಕ್ಕೆ ಉಂಡೆ ತಯಾರಿಸುವ ಕಾರ್ಯ ಭರದಿಂದ ಬಹುತೇಕ ಮನೆಗಳಲ್ಲಿ ಆರಂಭವಾಗಿದೆ. ನಗರ ಸೇರಿ ಜಿಲ್ಲಾ ವ್ಯಾಪ್ತಿಯ ನಾಗರಕಟ್ಟೆಗಳು ಹಬ್ಬಕ್ಕೂ ಒಂದೆರಡು ದಿನ ಮುನ್ನ ಸ್ವಚ್ಛಗೊಳ್ಳಲಿದ್ದು, ಸುಣ್ಣ-ಬಣ್ಣದಿಂದ ಕಂಗೊಳಿಸಲಿವೆ.