

ಬಸವಾಪಟ್ಟಣ: ಮಾನವನ ರಾಕ್ಷಸ ವೃತ್ತಿಗಳು ಬದಲಾಗಿ ತನು, ಮನ, ಭಾವ ಶುದ್ಧಿಯಾಗಬೇಕಾದರೆ ಅದು ಗುರುವಿನ ಕೃಪೆಯಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ಹೇಳಿದರು.
ಇಲ್ಲಿನ ಹಾಲಸ್ವಾಮಿ ಗದ್ದುಗೆ ಮಠದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ 2ನೇ ಸೋಮವಾರದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ಷಾಂತರ ಭಕ್ತರ ಬದುಕಿಗೆ ಹೊಸ ದಿಕ್ಕು, ಹೊಸ ಚೈತನ್ಯ, ಆತ್ಮವಿಶ್ವಾಸ ನೀಡಿದವರು ಲಿಂ. ವಿಶ್ವೇಶ್ವರ ಶ್ರೀಗಳು. ವಾಗ್ಮಿಗಳು, ವಿಚಾರವಂತರು, ತತ್ವಜ್ಞಾನಿಗಳು ಆದ ವಿಶ್ವೇಶ್ವರ ಮಹಾಸ್ವಾಮಿಗಳ ಭಾಷಾ ಪಾಂಡಿತ್ಯಕ್ಕೆ ಮನಸೋಲದ ವ್ಯಕ್ತಿಗಳೇ ಇಲ್ಲ ಎಂದು ಶ್ಲಾಘಿಸಿದರು.
ಮನ ಪರಿವರ್ತನೆಗೆ ಧರ್ಮಸಭೆಗಳು ಸಹಕಾರಿಯಾಗಿರುವುದರಿಂದ ಎಲ್ಲರೂ ಇಂತಹ ಸಭೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ವಾರ್ಥ, ದ್ವೇಷ, ಅಸೂಯೆ ತಾಂಡವವಾಡುತ್ತಿದ್ದು, ಬುದ್ದಿಜೀವಿ ಮನುಷ್ಯ ಧರ್ಮದಿಂದ ವಿಮುಖನಾಗುತ್ತಿರುವುದರಿಂದ ಎಷ್ಟೇ ಗಳಿಸಿದರೂ ಶಾಂತಿ ನೆಮ್ಮದಿ ಇಲ್ಲವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಯ್ಯದ್ ರಫೀಕ್, ನಿವೃತ್ತ ಶಿಕ್ಷಕ ಹಾಲಪ್ಪ, ಪತ್ರಕರ್ತ ಕಿರಣ್ ಕುಮಾರ್ ಮಾತನಾಡಿದರು.
ಕಲಾ ಬಳಗದವರಿಂದ ಸಂಗೀತ ಸೇವೆ ನಡೆಯಿತು. ಹುಡೆದರ ರುದ್ರಪ್ಪ ಮಾಸ್ತರ್, ಕೆ.ಎಂ. ವೀರಯ್ಯ, ಎಸ್.ಆರ್. ಸುರೇಶ್, ಪೂಜಾರ್ ಮಂಜಣ್ಣ ಪಾಲ್ಗೊಂಡಿದ್ದರು.