

ಚನ್ನಗಿರಿ: ಹನ್ನೆರಡನೇ ಶತಮಾನದ ಬಸವಣ್ಣ ಕಟ್ಟಿ ಬೆಳೆಸಿದ ಅನುಭವ ಮಂಟಪದಲ್ಲಿ ಇದ್ದಂತ ಶರಣರು ಸಮಾಜಕ್ಕೆ ನೀಡಿದ ಕೊಡುಗೆಯೇ ಸಾಹಿತ್ಯ. ಈ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಕರ್ತವ್ಯ ನಮ್ಮದಾಗಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಶ್ರೀಗಳು ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಗುಡಾಳ್ ಮಹೇಶ್ವರಪ್ಪ ಅವರ ಮನೆ ಅಂಗಳದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಶ್ರಾವಣಬಂತು ಅನುಭಾವ ತಂತು 7ನೇ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಸ್ಥಾವರಕ್ಕೂ ಮತ್ತು ಇಷ್ಟಲಿಂಗಕ್ಕೂ ಸಂಬಂಧವಿಲ್ಲ. ಗುರುಲಿಂಗ ಸಮಾನತೆ ಸೇವೆಗೆ ಇಷ್ಟಲಿಂಗವೇ ಆಧಾರ. ಅಡಿಗಡಿಗೂ ಮನಸ್ಸಿನಲ್ಲಿ ಶಿವಜ್ಞಾನ ಇರಬೇಕು, ಲಿಂಗ, ರುದ್ರಾಕ್ಷಿ, ಮಂತ್ರ ನಮ್ಮ ಜೀವನದ ಉಸಿರಾಗಿರಬೇಕು, ಇಷ್ಟಲಿಂಗದ ಧಾರ್ಮಿಕ ವಿಧಾನದ ಮೂಲಕ ಭೂಮಿಯಲ್ಲಿ ಇರುವವರೆಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಬಸವಂತಪ್ಪ ಮಾತನಾಡಿ, ಶಿವಶರಣರು ಭಕ್ತಿಯಿಂದ ಸ್ಪಟಿಸಿದಂತಹ ವಾಣಿಯೇ ವಚನಗಳು. ದೇವರು ಎಲ್ಲ ಕಡೆಯಲ್ಲಿ ಇದ್ದಾನೆ, ಇದನ್ನು ನಾವು ಕಾಯಕದಲ್ಲಿ ಮೊದಲು ಕಾಣಬಹದು ಎಂಬುದು ಶರಣರ ನಂಬಿಕೆಯಾಗಿತ್ತು ಎಂದರು.
ಸಮಾಜ ಸೇವಕಿ ಶಶಿಕಲಾಮೂರ್ತಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವಮಾನ, ಅಪಮಾನ ಎದುರಿಸಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಪುರಾಣ ಪುಣ್ಯ ಕಾಲದಿಂದ ಮಹಿಳೆಯರ ಮೇಲಿನ ಶೋಷಣೆ ತಪ್ಪಿಲ್ಲ. ಆದರೆ, ಇಂದು ಮಹಿಳೆ ಧೈರ್ಯವಾಗಿ ಎಲ್ಲವನ್ನೂ ಎದುರಿಸಿ ನಿಂತಿದ್ದಾಳೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಲ್.ಜೆ. ಮಧುಕುಮಾರ್, ಗುಡಾಳ ಉಜ್ಜಿನಪ್ಪ, ತಾಲೂಕು ಅಧ್ಯಕ್ಷ ಎಂ. ರಾಜಪ್ಪ, ಡಿ. ಬಸವರಾಜಪ್ಪ, ಕೆ.ಬಿ. ಪ್ರದೀಪ್, ಶರಣಪ್ಪ, ನಾಗರಾಜ್ ಕಾಕನೂರು, ವಿಶಾಲಮ್ಮ, ಗುಡಾಳ್ ಮಹೇಶ್ವರಪ್ಪ ಇದ್ದರು.