

ಚನ್ನಗಿರಿ: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಮೂಢನಂಬಿಕೆ, ಜಾತಿ ಪದ್ಧತಿ, ಕಂದಾಚಾರದ ವಿರುದ್ಧ ಹೊಸಕ್ರಾಂತಿ ಮಾಡಿದ ಬಸವಣ್ಣ ಮಾನವ ಕುಲದ ಉದ್ಧಾರಕ್ಕಾಗಿ ಜನ್ಮತಾಳಿದ ಮಹಾಪುರುಷರು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಣ್ಣಿಸಿದರು.
ತಾಲೂಕು ಚನ್ನೇಶಪುರ ಗ್ರಾಮದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಶ್ರಾವಣ ಬಂತು ಅನುಭಾವ ತಂತು ಎಂಬ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಜಾತಿ, ವರ್ಣ, ವರ್ಗದ ವಿರುದ್ಧ ಹೋರಾಡಿದ 12ನೇ ಶತಮಾನದ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕೊಡುವಲ್ಲಿ ಹೋರಾಡಿದರು. ಜನರ ಕಲ್ಯಾಣಕ್ಕಾಗಿ ಅನುಭವ ಮಂಟಪ ರಚಿಸಿ ಎಲ್ಲ ವರ್ಗದವರು ಸೇರಿ ಸಮಾಜ ಸೇವೆ ಮಾಡಿದರು ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದಾಗ ಮಾತ್ರ ಮನಸ್ಸು ಪರಿಶುದ್ಧಗೊಳ್ಳಲಿದೆ. ಶ್ರಾವಣ ಮಾಸದ ಪರಿಶುದ್ಧ ಮಾಸದಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಾವೆಲ್ಲರೂ ಧನ್ಯರು ಎಂದರು.
ಅಭಿವೃದ್ಧಿ ಮಂತ್ರ ಹೇಳಿಕೊಂಡು ಚನ್ನಗಿರಿ ಕ್ಷೇತ್ರವನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಸಲ್ಲುತ್ತದೆ. ಸಾವಿರಾರು ಕೋಟಿ ಅನುದಾನ ತಂದು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.
ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲೇ ವೈಚಾರಿಕ ಪ್ರಜ್ಞೆಗಳನ್ನು ಬೆಳೆಸುತ್ತ ಜನಜಗೃತಿ ಮೂಡಿಸಿದವರು ಎಂದರು.
ಬಸವತತ್ವ ಚಿಂತಕ ಶಂಕರ ದೇವನೂರು ಉಪನ್ಯಾಸ ನೀಡಿದರು. ಮುಖಂಡ ಮಾಡಾಳು ಮಲ್ಲಿಕಾರ್ಜುನ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ರಾಜಪ್ಪ, ಯುಗಧರ್ಮ ರಾಮಣ್ಣ, ದೇವರಹಳ್ಳಿ ಎ.ಎಸ್. ಬಸವರಾಜ್, ಮಂಗೇನಹಳ್ಳಿ ಲೋಹಿತ್, ರಾಜಪ್ಪ, ಕೆ.ಸಿ. ಕೆಂಚಪ್ಪ, ಎಂ.ಯು. ಚನ್ನಬಸಪ್ಪ, ಪಟ್ಲಿ ನಾಗರಾಜ್, ದಿಗ್ಗೇನಹಳ್ಳಿ ನಾಗರಾಜ್, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್ ಇತರರಿದ್ದರು.