ಶಿವಜ್ಞಾನ, ವಿಭೂತಿ ಜೀವನದ ಉಸಿರಾಗಲಿ

mkg
Published on

ಚನ್ನಗಿರಿ: ಭಕ್ತರು ಲಿಂಗದ ಮೇಲೆ ಭಕ್ತಿ ಇಡಬೇಕು. ಮನಸ್ಸಿನಲ್ಲಿ ಶಿವಜ್ಞಾನ, ವಿಭೂತಿ, ರುದ್ರಾಕ್ಷಿ, ಮಂತ್ರ ಜೀವನದ ಉಸಿರಾಗಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಶ್ರೀ ತಿಳಿಸಿದರು.

ತಾಲೂಕಿನ ನಲ್ಲೂರು ಗ್ರಾಮದ ಬಂಡಿ ಸತೀಶ್ ಅವರ ಮನೆ ಅಂಗಳದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದಿಂದ ಏರ್ಪಡಿಸಿದ್ದ ಶ್ರಾವಣ ಬಂತು ಅನುಭಾವ ತಂತು 3ನೇ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸ್ಥಾವರಕ್ಕೂ ಇಷ್ಟಲಿಂಗಕ್ಕೂ ಸಂಬಂಧವಿಲ್ಲ. ಗುರುಲಿಂಗ ಸಮಾನತೆ ಸೇವೆಗೆ ಇಷ್ಟಲಿಂಗವೇ ಆಧಾರ. ಇಷ್ಟಲಿಂಗವು ಅಂತರಂಗದ ಅರಿವಿನ ಬೆಳಕಿನ ಕಡೆಗೆ ಕೊಂಡೊಯ್ಯುವ ಶ್ರೇಷ್ಟ ಸಾಧನ. ಆಂತಹ ಬೆಳಕಿನಲ್ಲಿ ಸೇರಿಹೋದಾಗ ಶಿವತತ್ವ ಪಡೆಯಬಹುದು ಎಂದರು.

ವಿನಯದ ಜತೆಗೆ ಸ್ವಾಭಿಮಾನ, ಐಶ್ವರ್ಯದ ಜತೆಗೆ ದಾಸೋಹ, ವಿದ್ಯೆ ಜತೆಗೆ ವಿನಯ, ಧೈರ್ಯ ಮತ್ತು ಸಾಹಸದ ಎದೆಗುಂದದ ವ್ಯಕ್ತಿತ್ವದ ಐಕ್ಯಸ್ಥಳ ಸ್ಥಾಪನೆ ಮಾಡಿದ್ದು ಬಸವಣ್ಣನವರು ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ಜಿ.ಬಿ. ಚಂದ್ರಶೇಖರ್ ಮಾತನಾಡಿ, ಅರಿವಿನ ಕುರುಹು ಇಷ್ಟಲಿಂಗ, ಬಾಹ್ಯಸ್ಥಲದ ಗುರು ಇಷ್ಟಲಿಂಗ, ಧ್ಯಾನದ-ಅನುಸಂಧಾನದಿಂದ ಮಾತ್ರ ಮರೆವಿನಲ್ಲಿರುವ ಮಾನವ ಅರಿವುಳ್ಳ ಶರಣನಾಗಬಲ್ಲ. ಇಷ್ಟಲಿಂಗಕ್ಕೆ ಮಹತ್ವ ನೀಡಿದರೆ ಮಾತ್ರ ನಮ್ಮ ಸಂಸ್ಕೃತಿಗೆ ನಾವು ಗೌರವ ಕೊಟ್ಟಂತಾಗುತ್ತದೆ ಎಂದರು.

ಇದಕ್ಕೆ ಬಸವಣ್ಣರವರ ಮಾರ್ಗದಂತೆ ಶ್ರಮ ಸಂಸ್ಕೃತಿಯಲ್ಲಿ ನಾವು ಸಾಗಬೇಕಿದೆ. ದಾಸೋಹ ಮಾಡುವ ಗುಣ ಬೆಳೆಸಿಕೊಳ್ಳಲು ಕಾಯಕಕ್ಕೆ ಮಹತ್ವ ನೀಡಬೇಕು ಎಂದರು .

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ. ಪರಮೇಶ್ವರಪ್ಪ, ಕಾರ್ಯದರ್ಶಿ ಮರುಳಸಿದ್ದಯ್ಯ, ತಾಲೂಕು ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಕೆ.ಜಿ. ಶಿವಮೂರ್ತಿ, ಎಂ.ಯು. ಚನ್ನಬಸಪ್ಪ, ಟಿ.ವಿ. ಚಂದ್ರಪ್ಪ, ಎಂ.ಜಿ. ಧನಂಜಯ್, ಆವರೆಗೆರೆ ರುದ್ರಮುನಿ, ನಲ್ಲೂರು ಬಂಡಿ ಸತೀಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net