ತಿಂಗಳೊಳಗೆ ಅರ್ಹರಿಗೆ ಹಕ್ಕುಪತ್ರ ವಿತರಣೆ: ಶಾಸಕ ರವಿಕುಮಾರ್ ಗಣಿಗ ಭರವಸೆ

Shramikanagar Residents Rights Conference Mandya
Published on

ಮಂಡ್ಯ: ನಗರದ ನ್ಯೂ ತಮಿಳು ಕಾಲನಿಯ 170 ನಿವಾಸಿಗಳ ಹಾಗೂ ಕಾಳಪ್ಪ(ಆರ್‌ಟಿಒ) ಬಡಾವಣೆ ನಿವಾಸಿಗಳ ಹಕ್ಕುಪತ್ರಗಳು ಸಿದ್ಧವಾಗಿದೆ. ಶುಗರ್ ಟೌನ್ ಬಳಿಯ ಶ್ರಮಿಕ ನಗರದ ಸರ್ವೇ ಕಾರ್ಯ ನಡೆಯುತ್ತಿದೆ. ಹಾಗಾಗಿ ಈ ಎಲ್ಲ ನಿವಾಸಿಗಳಿಗೆ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಶ್ರಮಿಕರ ನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಮಹಿಳಾ ಮುನ್ನಡೆ ವತಿಯಿಂದ ಆಯೋಜಿಸಿದ್ದ ಶ್ರಮಿಕನಗರ ನಿವಾಸಿಗಳ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದ ಗುರುಮಠ ಶ್ರಮಿಕ ನಗರಕೆರೆ ಎಂದು ದಾಖಲಾಗಿದ್ದು, ಅದನ್ನು ದಾಖಲೆಯಿಂದ ಅಳಿಸಲು ಸರ್ಕಾರದೊಂದಿಗೆ ಜಿಲ್ಲಾಧಿಕಾರಿ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಈ ಸಮಸ್ಯೆ ಎರಡು ಅಥವಾ ಮೂರು ತಿಂಗಳಿನಲ್ಲಿ ಬಗೆಹರಿಯುವ ವಿಶ್ವಾಸವಿದೆ. ಕಾಳಿಕಾಂಭ ಸ್ಲಂ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನ ನಡೆದಿದೆ. ಈ ಬಗ್ಗೆ ಮಾಜಿ ಸಚಿವ ಆತ್ಮಾನಂದ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವಿವರಿಸಿದರು.

ಕುರುಬರ ಹಾಸ್ಟೆಲ್ ಬಳಿಯ ರೈಲ್ವೆ ಹಳಿ ಪಕ್ಕ ಇರುವ ನಿವಾಸಿಗಳನ್ನು ಚಿಕ್ಕಮಂಡ್ಯ ಕರೆಯಂಗಳದಲ್ಲಿ ನಿರ್ಮಿಸಲಾಗಿರುವ ಶ್ರಮಿಕರ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಲಾಗುವುದು. ಇನ್ನೂ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಶ್ರಮಿಕ ನಿವಾಸಿಗಳು ಹಾಗೂ ವಸತಿ ರಹಿತರಿಗೆ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಹೋರಾಟಗಾರ ಡಾ.ವಾಸು ಮಾತನಾಡಿ, ಜಿಲ್ಲೆಯಲ್ಲಿ ಹಲವು ದಶಕಗಳಿಂದ ಶ್ರಮಿಕರು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೋರಾಟದಿಂದಾಗಿ ಇದುವರೆಗೆ ಅಲ್ಪಸ್ವಲ್ಪ ಸಮಸ್ಯೆಗಳು ಬಗೆಹರಿದಿವೆ. ಆದರೂ ಇನ್ನೂ ಸಾಕಷ್ಟು ಸಮಸ್ಯೆಗಳು ಹಾಗೇ ಉಳಿದಿವೆ. ಆದ್ದರಿಂದ ಸ್ಥಳೀಯ ಶಾಸಕರು, ಕೊಳಚೆ ಅಭಿವೃದ್ದಿ ಮಂಡಳಿಯ ಅಧಿಕಾರಿಗಳು ಇನ್ನೂ 3 ತಿಂಗಳಲ್ಲಿ ಮಂಡ್ಯನಗರ ಹಾಗೂ ಮದ್ದೂರಿನ ತಮಿಳು ಕಾಲನಿ ಶ್ರಮಿಕನಗರಗಳ ಸಮಸ್ಯೆಗಳನ್ನು ಬಗೆಹರಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.

ಶ್ರಮಿಕ ಜನರಿಗೆ ರಾಜಕೀಯ ಪ್ರಜ್ಞೆ ಅಗತ್ಯ, ಯಾರು ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸಬಲ್ಲರು ಎಂಬುದನ್ನು ಅರಿಯಬೇಕು. ಚುನಾವಣೆ ಸಂದರ್ಭದಲ್ಲಿ ಮದ್ಯ, ಹಣ ಸೇರಿದಂತೆ ಇತರೆ ಆಮಿಷಗಳಿಗೆ ಬಲಿಯಾಗದೇ ಯೋಗ್ಯರನ್ನು ಬೆಂಬಲಿಸುವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಗರದಲ್ಲಿ 4 ಬಗೆಯ ಸ್ಲಂಗಳಿವೆ. ಸರ್ಕಾರಿ, ಖಾಸಗಿ, ರೈಲ್ವೇ ಹಳಿಗಳ ಪಕ್ಕ ಇರುವ ಹಾಗೂ ಹೈ ಟೆನ್ಷನ್ ತಂತಿಗಳ ಕೆಳಗೆ ಇರುವ ಸ್ಲಂಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಸೂಕ್ತ ಪರಿಹಾರ ಒದಗಿಸಿ, ಸಮಸ್ಯೆ ಬಗೆಹರಿಸಬೇಕೆಂದು ಶಾಸಕ ರವಿಕುಮಾರ್ ಅವರ ಮುಂದೆ ಅಹವಾಲು ಮಂಡಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಜಾಗೃತ ಕರ್ನಾಟಕದ ಎನ್.ನಾಗೇಶ್, ಕರ್ನಾಟಕ ಜನಾಂದೋಲನ ಸಂಘಟನೆ ರಾಜ್ಯ ಸಂಚಾಲಕ ಮರಿಯಪ್ಪ, ರೈತ ಸಂಘದ ಲತಾ ಶಂಕರ್, ಮಹಿಳಾ ಮುನ್ನಡೆ ಶಿಲ್ಪಾ, ವಿದ್ಯಾರ್ಥಿ ಸಂಘಟನೆಯ ಅಂಜಲಿ, ನಗರಸಭೆ ಹಾಗೂ ಕೊಳಗೇರಿ ಅಭಿವೃದ್ದಿ ಮಂಡಳಿಯ ಎಇಇ ಕುಮಾರ್ ಈಶ್ವರ್, ಎಇ ಕಾವ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net