

ಶಿವಮೊಗ್ಗ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಳೆದ ಎರಡು ವರ್ಷಗಳಲ್ಲಿ ತಮ್ಮ ಇಲಾಖೆಯಲ್ಲಿ ಜಾರಿಗೆ ತಂದ ವಿವಿಧ ಯೋಜನೆಗಳ ವಿವರವುಳ್ಳ ಶ್ರಮಿಕ ಬಂಧು ಕಿರು ಹೊತ್ತಗೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಕ್ರಿಯಾಶೀಲ ನಾಯಕ ಸಂತೋಷ್ ಲಾಡ್ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕಲ್ಯಾಣ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಎಚ್.ಪಿ.ಗಿರೀಶ್ ತಿಳಿಸಿದರು.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಾಯ್ದೆ, ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ, ರಾಜ್ಯದ 43 ಕಡೆಗಳಲ್ಲಿ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ, ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯ ನೀಡಲಾಗಿದೆ. ನಕಲಿ ಮತ್ತು ಅನರ್ಹ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ಬೊಕ್ಕಸಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಿದ್ದಾರೆ ಎಂದು ಹೇಳಿದರು.
ಮ್ಯಾನ್‌ಪವರ್ ಏಜೆನ್ಸಿಗಳಡಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಜಿಲ್ಲಾ ಕಾರ್ಮಿಕ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಈಗ ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲ ಜಿಲ್ಲೆಗಳಲ್ಲೂ ಅಸ್ತಿತ್ವಕ್ಕೆ ಬರಲಿದೆ. ಕಾರ್ಮಿಕ ಇಲಾಖೆಯ ಸಾಧನೆಗಳನ್ನು ವಿವರಿಸುವ ಸಂಗತಿಗಳು ಈ ಕಿರು ಹೊತ್ತಗೆಯಲ್ಲಿವೆ ಎಂದು ತಿಳಿಸಿದರು.
ಮುಖಂಡರಾದ ಕೆ.ರಂಗನಾಥ್, ಶರತ್ ಮರಿಯಪ್ಪ, ಎಂ.ಪ್ರವೀಣ್‌ಕುಮಾರ್, ಲೋಕೇಶ್, ಎಸ್.ಕುಮರೇಶ್, ಸಂದೇಶ್, ರಾಕೇಶ್, ಇರ್ಫಾನ್, ಸಚಿನ್, ಮೋಹನ್, ಸ್ವರೂಪ್, ಎಂ.ರಾಹುಲ್, ಪವನ್, ಬಸವರಾಜ್, ಕಿರಣ್, ಎಂ.ಪ್ರವೀಣ್ ಕುಮಾರ್ ಮುಂತಾದವರಿದ್ದರು.