

ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಜನ್ಮದಿನ ಹಾಗೂ ವಿಶ್ವಕರ್ಮ ಜಯಂತಿ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕ ಅಭಿಯಾನದಡಿ, ನಗರದ ವಿಶ್ವಕರ್ಮ ವೃತ್ತದಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ಮಾಡಲಾಯಿತು. ಇದೇವೇಳೆ ವಿಶ್ವಕರ್ಮ ಜಯಂತಿ ಅಂಗವಾಗಿ ವೃತ್ತದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ವೇಳೆ ಪಾಲಿಕೆಯ ಸಭಾನಾಯಕ ಈರೇಶ ಅಂಚಟಗೇರಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ನಾಯಕರು. ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಜನಸಾಮಾನ್ಯರೊಂದಿಗೆ ಸಂಪರ್ಕ ಸಾಽಸುವ ಕೌಶಲ್ಯ ಹೊಂದಿದ್ದಾರೆ. ಪ್ರತಿಪಕ್ಷಗಳಿಂದ ತೀವ್ರ ಟೀಕೆಗಳಿದ್ದರೂ ಅವರ ಆಡಳಿತವು ಭಾರತದ ಅರ್ಥ ವ್ಯವಸ್ಥೆಯನ್ನು ಬಲಪಡಿಸಿದೆ. ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನವನ್ನು ಹೆಚ್ಚಿಸಿದೆ. ಅವರ ಪರಿಶ್ರಮ, ಸಮರ್ಪಣೆ, ನಾಯಕತ್ವ ಗುಣಗಳು ವಿಶ್ವದ ಪ್ರಭಾವಿ ನಾಯಕರನ್ನಾಗಿಸಿವೆ ಎಂದರು.
ಭೂಮಿಯ ಸೃಷ್ಟಿಕರ್ತ ವಿಶ್ವಕರ್ಮ. ವಾಸ್ತುಶಿಲ್ಪದ ಹರಿಕಾರ, ದ್ವಾರಕೆಯನ್ನು ನಿರ್ಮಿಸಿದ ಪರಮಾತ್ಮ. ರಾಜ್ಯದಲ್ಲಿ ಮೊದಲ ವಿಶ್ವಕರ್ಮ ವೃತ್ತ ಧಾರವಾಡದಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಪಾಲಿಕೆ ಸದಸ್ಯ ಶಂಕರ ಶೆಳಕೆ, ರಾಜೇಶ್ವರಿ ಅಳಗವಾಡಿ, ಸಂತೋಷ ಬಡಿಗೇರ, ಸುಮಿತ್ರ ಬಡಿಗೇರ, ಬಸು ಬಾಳಗಿ, ಮಂಜು ನಡಟ್ಟಿ, ಶ್ರೀನಿವಾಸ ಕೋಟ್ಯಾನ್, ಪ್ರಣಿತ ರಾಮನಗೌಡರ, ಪುಷ್ಪಾ ನವಲಗುಂದ, ಸಂಕಲ್ಪ ಕಲ್ಯಾಣಶೆಟ್ಟಿ, ಕಾರ್ಯಕರ್ತರು ಮತ್ತು ವಿಶ್ವಕರ್ಮ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.