

ದಾಬಸ್‌ಪೇಟೆ: ವಿದ್ಯಾರ್ಥಿಗಳು ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಿದರೆ ಉತ್ತಮಮಟ್ಟಕ್ಕೆ ಬೆಳೆಯಬಹುದು ಎಂದು ಅಗಳಕುಪ್ಪೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ ತಿಳಿಸಿದರು.
ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಕ್ಕಳೋತ್ಸವದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು. ಜೀವನದಲ್ಲಿ ಗುರಿ ಜತೆಗೆ ಗುರುವಿನ ಮಾರ್ಗದರ್ಶನವಿದ್ದರೆ ಸಾಧನೆ ಮಾಡಬಹುದು. ಮಕ್ಕಳಲ್ಲಿ ಉತ್ತಮ ಚಿಂತನೆ ಮೂಡಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ, ಸದೃಢ ದೇಹದ ಜತೆಗೆ ಶಿಕ್ಷಣ ಪಡೆಯಿರಿ, ಎಲ್ಲ ಆಯಾಮದ ಚಟುವಟಿಕೆ ಮೂಲಕ ನೈತಿಕ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದರು.
ಅಗಳಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಲಕ್ಕೂರು ಬಸವರಾಜು ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ಶಾಲೆಗಳಿಗೆ ಬಿಸಿಯೂಟ, ಹಾಲು, ಸಮವಸ, ಪಠ್ಯ ಪುಸ್ತಕ, ಸೈಕಲ್ ಹಾಗು ಶೂ ಸಾಕ್ಸ್ ನೀಡುತ್ತಿದೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಅನೇಕ ಜನರು ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನದಲ್ಲಿದ್ದಾರೆ. ಆದ್ದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೆಲಸ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆಗ ಮಾತ್ರ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಲು ಆಸಕ್ತಿ ವಹಿಸುತ್ತಾರೆ. ಮಕ್ಕಳು ಶಾಲೆಯಲ್ಲಿ ಕಲಿಸಿದ ಅಂದಿನ ಪಾಠವನ್ನು ಅಂದೆ ಅಭ್ಯಾಸ ಮಾಡಿ, ಉಂಟಾಗುವ ಸಮಸ್ಯೆಗೆ ಅಂದೆ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಪರೀಕ್ಷೆಯನ್ನು ಅಳುಕಿಲ್ಲದೆ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಲಕ್ಕೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ವೈ.ಮೇನಕಾ, ಶಕುಂತಲಾ ಶಿವರಾಜು, ಮುಖ್ಯಶಿಕ್ಷಕ ಛಾಯಾದೇವಿ, ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಘಟನಾ ಕಾರ್ಯದರ್ಶಿ ಜಿ.ವಿ.ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘ ಕೆ.ಎಲ್.ನಾಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಚೇನಹಳ್ಳಿ ಪರಮೇಶ್ವರ, ಸಿಆರ್‌ಪಿ ಪಿ.ಪವಿತ್ರಾ, ಶಿಕ್ಷಕರಾದ ಸಿ.ಗಂಗಮಲ್ಲಯ್ಯ, ಎಂ.ಶಶಿಭೂಷಣ್. ಬಿ.ಆರ್.ವಿಜಯಾ, ಎಸ್.ಸ್ವರ್ಣಾಂಭಾ ಇತರರಿದ್ದರು.