

ಮಂಡ್ಯ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದಲೂ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.
ಗ್ರಾಮೀಣ ಸಮುದಾಯದ ಅಭಿವೃದ್ಧಿ ಹಾಗೂ ನೈರ್ಮಲ್ಯತೆ ಕಾಪಾಡಲು ‘ಸ್ವಚ್ಛತೆಯೆಡೆಗೆ ದಿಟ್ಟ ನಡಿಗೆ’ ಎಂಬ ಘೋಷ ವಾಕ್ಯದೊಂದಿಗೆ ಜಾಥಾ ಆಯೋಜಿಸಲಾಗಿತ್ತು. ಅದರಂತೆ ಜಾಗೃತಿ ಮೆರವಣಿಗೆ ಮಾಡಲಾಯಿತು. ಮಾತ್ರವಲ್ಲದೆ ಜಿಪಂ ಆವರಣದ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಇಒ ಕೆ.ಆರ್.ನಂದಿಇ, ಸ್ವಚ್ಛತೆಗೆ ಹೆಚ್ವಿನ ಮಹತ್ವ ನೀಡುವುದು ಅಗತ್ಯ. ನಮ್ಮ ಸುತ್ತಮುತ್ತಲಿನ ಪರಿಸರ, ಕೆಲಸ ನಿರ್ವಹಿಸುವ ಸ್ಥಳ, ಮನೆ ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಸುಂದರ ಗ್ರಾಮಗಳನ್ನಾಗಿ ರೂಪಿಸಲು ಸಾಧ್ಯ. ಸ್ವಚ್ಛತೆ ಅನ್ನುವುದು ಒಂದು ದಿನದ ಕೆಲಸವಲ್ಲ. ನಿರಂತರವಾಗಿ ನಡೆಯುವಂತಹ ಪ್ರಕ್ರಿಯೆಯಾಗಬೇಕು. ಸ್ವಚ್ಛತಾ ಅಭಿಯಾನದ ಅಂಗವಾಗಿ ಮೊದಲ ಹಂತದಲ್ಲಿ ಜಿಪಂ ಆವರಣದಲ್ಲಿ ಶ್ರಮದಾನ ಮಾಡಲಾಗಿದೆ. ಮುಂದಿನ ಹಂತದಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮ ಕೈಗೊಂಡು ದೇಶದ ಅಭಿವೃದ್ಧಿಯ ಜತೆಗೆ ಒಂದು ಸುಂದರ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಸ್ವಚ್ವತೆಯ ಕಲ್ಪನೆ ಯಾವಾಗಲೂ ನಮ್ಮ ಅಂತರಾಳದಲ್ಲಿ ಜಾಗೃತವಾಗಿರಬೇಕು. ಈ ಬಗ್ಗೆ ಅರಿವು ಮೂಡಿಸುವುದು ಬಹಳ ಪ್ರಮುಖ. ನಮ್ಮ ಇಲಾಖೆಯ ಯೋಜನೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಈ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು. ಜಪಾನ್‌ನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸ್ವಚ್ಛತೆ ಕುರಿತು ಪಾಲಕರು ಅರಿವನ್ನು ಮೂಡಿಸಿರುತ್ತಾರೆ. ಈ ಕಲ್ಪನೆ ಎಂಬುದು ಶಾಲಾ ಪೂರ್ವ ಹಂತದಿಂದಲೇ ಪ್ರಾರಂಭವಾಗುತ್ತದೆ. ನಂತರ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಕೆಲವೊಂದು ಜವಾಬ್ದಾರಿಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ವಹಿಸಿದರೆ ಅವರು ಜೀವನ ಪೂರ್ತಿ ಅಳವಡಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿಗಳಾದ ಲಕ್ಷ್ಮೀ ಮತ್ತು ಬಾಬು, ಮುಖ್ಯಯೋಜನಾಧಿಕಾರಿ ಧನುಷ್ ಇತರರಿದ್ದರು.