

ಮಂಡ್ಯ: ಮನುಷ್ಯ ಜೀವನದಲ್ಲಿ ಉತ್ತಮ ಆರೋಗ್ಯದೊಂದಿಗೆ ಬದುಕಲು ಸ್ವಚ್ಛತೆ ಬಹಳ ಮುಖ್ಯ ಎಂದು ಶಾಸಕ ರವಿಕುಮಾರ್ ಗಣಿಗ ಅಭಿಪ್ರಾಯಪಟ್ಟರು.
ತಾಲೂಕಿನ ಕೊಮ್ಮೇರಹಳ್ಳಿ ಬೆಟ್ಟದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛತಾ ಹಿ ಸೇವಾ(ಸ್ವಚ್ಛೋತ್ಸವ) ಪಾಕ್ಷಿಕ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಶ್ರಮದಾನದಲ್ಲಿ ಭಾಗವಹಿಸಿದ ಅವರು, ಮನೆಯ ಸುತ್ತಮುತ್ತ ಕಸ ಹಾಕುವುದು ಮತ್ತು ಸರ್ಕಾರ ಕಸವನ್ನು ವಿಲೇವಾರಿ ಮಾಡುತ್ತಿಲ್ಲವೆಂದು ಅಪಾದನೆ ಮಾಡುವುದು ಬೇಡ. ಪ್ರತಿಯೊಬ್ಬರೂ ಸರ್ಕಾರದಿಂದ ನಿಗದಿಪಡಿಸಿರುವ ಕಸ ವಿಲೇವಾರಿ ವಾಹನಗಳಿಗೆ ಪ್ರತಿನಿತ್ಯ ಕಸಗಳನ್ನು ನೀಡಿ ವಾತಾವರಣದ ಶುಚಿತ್ವವನ್ನು ಕಾಪಾಡಿ ಎಂದು ಸಲಹೆ ನೀಡಿದರು.
ಸರ್ಕಾರದಿಂದ ಕಾಲ ಕಾಲಕ್ಕೆ ಸ್ವಚ್ಛತೆ ಕುರಿತು ಆಂದೋಲನ, ಜಾಥಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬರೂ ಸ್ವಚ್ಛತೆಯ ಮಹತ್ವವನ್ನು ತಿಳಿದುಕೊಂಡು ಸುತ್ತ ಮುತ್ತಲಿನ ಜನರಲ್ಲೂ ಸ್ವಚ್ಛತೆಯ ಅರಿವು ಮೂಡಿಸಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂಡೆಡೆ ಸಂಗ್ರಹಿಸಿ ವಿಂಗಡಿಸಿ ವಿಲೇವಾರಿ ಮಾಡಬೇಕು. ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆ ಮಾಡುವುದು ಕೇವಲ ಗ್ರಾಮ ಪಂಚಾಯಿತಿಗಳ ಕರ್ತವ್ಯವಲ್ಲ. ನಮ್ಮ ಗ್ರಾಮ, ರಾಜ್ಯ, ದೇಶವನ್ನು ಸ್ವಚ್ಛ ಸುಂದರ ಗ್ರಾಮಗಳನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು. ಎಲ್ಲರೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನವು ರಾಷ್ಟ್ರವ್ಯಾಪಿ ನಡೆಯುತ್ತಿದೆ. ಈ ಆಂದೋಲನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ ಇತರರಿದ್ದರು.