

ಪ್ರಕಾಶ್ ಮಂಜೇಶ್ವರ ಮಂಗಳೂರು
ದೇಶದ ದುಡಿಯುವ ವರ್ಗದಲ್ಲಿ ಶೇ.92ರಷ್ಟು ಇರುವ ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯ ಕಾಲ ಆಸರೆಯಾಗಿ ನಿಲ್ಲಲು ಅನುಕೂಲ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ (ಪಿಎಂ- ಎಸ್‌ವೈಎಂ) ಪಿಂಚಣಿ ಯೋಜನೆ ನೋಂದಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ಹತ್ತಿರದ ಕೊಡಗು ಜಿಲ್ಲೆ ಕೊನೆಯ ಸ್ಥಾನ ಹಾಗೂ ರಾಜಧಾನಿ ಬೆಂಗಳೂರು ತೃತೀಯ ಸ್ಥಾನದಲ್ಲಿದೆ. 4,108 ಕಾರ್ಮಿಕರನ್ನು ನೋಂದಣಿ ಮಾಡಿಕೊಂಡಿರುವ ಉಡುಪಿ ಜಿಲ್ಲೆ ಐದನೇ ಸ್ಥಾನದಲ್ಲಿದೆ.
ಹೆಚ್ಚು ಉಪಯುಕ್ತ: ವೃದ್ಧರಿಗೆ ಮಾಸಿಕ ಒಂದು ಸಾವಿರ ರೂ. ಪಿಂಚಣಿ ಒದಗಿಸುವ ಸಾಮಾನ್ಯ ‘ಸಂಧ್ಯಾ ಸುರಕ್ಷಾ’ ಯೋಜನೆ ಹಾಗೂ ಮಾಸಿಕ ಶುಲ್ಕ ಸ್ವಲ್ಪ ಅಧಿಕ ಪಾವತಿಸಿ ಮಾಸಿಕ ಐದು ಸಾವಿರ ರೂ. ತನಕ ಪಿಂಚಣಿ ಪಡೆಯಲು ಆವಕಾಶವಿರುವ ಅಟಲ್ ಪಿಂಚಣಿ ಯೋಜನೆ ಜಾರಿಯಲ್ಲಿದೆ.
ಆದರೆ ಕನಿಷ್ಠ ಕಂತು ಪಾವತಿಸಿ ಮಾಸಿಕ ಮೂರು ಸಾವಿರ ರೂ. ಪಿಂಚಣಿ ಪಡೆಯಲು ಅವಕಾಶವಿರುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ, ಆರ್ಥಿಕವಾಗಿ ಹಿಂದುಳಿದಿರುವ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಚಾಲ್ತಿಯಲ್ಲಿರುವ ಜನಪ್ರಿಯ ಯೋಜನೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಯತ್ನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ 5,737 ಕಾರ್ಮಿಕರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇದು ರಾಜ್ಯದಲ್ಲೇ ಅತ್ಯುತ್ತಮ ಸಾಧನೆ.
ಯಾರು ಅರ್ಹರು?: ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18ರಿಂದ 40 ವರ್ಷದೊಳಗಿನವರು ನೋಂದಣಿ ಮಾಡಿಕೊಳ್ಳಬಹುದು. ಮಾಸಿಕ ಆದಾಯ 15,000 ರೂ.ಗಿಂತ ಕಡಿಮೆ ಇರಬೇಕು. ಆದಾಯ ತೆರಿಗೆ/ ಇಎಸ್‌ಐ/ ಪಿಎಫ್/ ಎನ್‌ಪಿಎಸ್ ಯೋಜನೆ ವ್ಯಾಪ್ತಿಗೆ ಒಳಪಟ್ಟಿರಬಾರದು. ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತರು, ಸ್ವಉದ್ಯೋಗಿಗಳು, ಕೃಷಿ , ಕೈಮಗ್ಗ ಸಹಿತ ವಿವಿಧ ಅಸಂಘಟಿತ ವಲಯದ ಕಾರ್ಮಿಕರು ಅರ್ಹರು.
ನೋಂದಣಿ ಹೇಗೆ?: ‘ಮಂಗಳೂರು ಒನ್’ನಂತಹ ಯಾವುದೇ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ)ಗಳಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸೇವಾ ಕೇಂದ್ರದಲ್ಲಿ ಕಾರ್ಮಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಈ ಕುರಿತ ಮಾಹಿತಿಯನ್ನು ಎಲ್‌ಐಸಿ, ಕಾರ್ಮಿಕ ಇಲಾಖೆ, ಇಎಸ್‌ಐ ಅಥವಾ ಭವಿಷ್ಯ ನಿಧಿ ಕಚೇರಿಗಳಲ್ಲಿ ಪಡೆಯಬಹುದು. ಮಾಹಿತಿಗೆ ಟೋಲ್ ಫ್ರೀ ನಂ. 1800- 267-6888 ಅಥವಾ ಞಚ್ಞಚ್ಞ.ಜ್ಞಿ ಸಂಪರ್ಕಿಸಬಹುದು.
ಪ್ರಸ್ತುತ ಕಾರ್ಮಿಕ ಇಲಾಖೆ ಪಿಎಂ- ಎಸ್‌ವೈಎಂ ಕುರಿತು ವ್ಯಾಪಕ ಜಾಗೃತಿ ಕಾರ‌್ಯಕ್ರಮ ನಡೆಸುತ್ತಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಈ ವಿಷಯದಲ್ಲಿ ಮುತುವರ್ಜಿ ವಹಿಸುತ್ತಿವೆ. ಟೈಲರ್ಸ್ ಅಸೋಸಿಯೇಶನ್ ಕಳೆದ ಒಂದು ವರ್ಷದಲ್ಲಿ 400 ಮಂದಿಯ ನೋಂದಣಿ ಮಾಡಿದೆ. ಸಾರ್ವಜನಿಕರು ಅಪೇಕ್ಷಿಸಿದರೆ ಅಗತ್ಯ ಪ್ರದೇಶಗಳಲ್ಲಿ ಮಾಹಿತಿ ಒದಗಿಸಲು ಇಲಾಖೆ ಸಿದ್ಧವಾಗಿದೆ. - ವಿಲ್ಮ ಎಲಿಜಬೆತ್ ತಾವ್ರೊ, ಕಾರ್ಮಿಕ ಅಧಿಕಾರಿ, ಮಂಗಳೂರು