

ವಿಜಯವಾಣಿ ಸುದ್ದಿಜಾಲ ನಂದಗುಡಿ
ಯುವಜನತೆ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕಸಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕು. ಪ್ರತಿಯೊಬ್ಬರು ಸ್ವಚ್ಛತೆಗೆ ಸಮಯ ಮೀಸಲಿಟ್ಟರೆಆರೋಗ್ಯಯುತ ಜೀವನ ಸಾಗಿಸಲು ಸಾಧ್ಯ ಎಂದು ಗ್ರಾಪಂ ಕಾರ್ಯದರ್ಶಿ ವೆಂಕಟೇಶ್ ಹೇಳಿದರು.
ನಂದಗುಡಿಯ ಗಾಂಧಿ ಪಾರ್ಕ್‌ನ ಆವರಣದಲ್ಲಿ ಜಿಪಂ ಹಾಗೂ ನಂದಗುಡಿ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಇ-ಸೇವಾ ಕಾರ್ಯಕ್ರಮದಡಿ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡದೆ ವಿಲೇವಾರಿ ಮಾಡಿ, ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಗಟ್ಟಿ, ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬಹುದು. ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ರಸ್ತೆಗಳ ಮೇಲೆ ಬಿಸಾಡದೆ, ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗಲಿದೆ.
ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿದುಕೊಂಡು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದರು.
ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆವಹಿಸಬೇಕು. ಗ್ರಾಮಸ್ಥರು ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದರು.
ಎಸ್‌ಡಿಎ ಸಂಪತ್‌ಕುಮಾರ್, ಕರ ವಸೂಲಿಗಾರ ಮನೋಜ್, ಗಣಕ ಯಂತ್ರ ನಿರ್ವಾಹಕಿ ನಯನಾ, ಸಿಬ್ಬಂದಿ ಶಾಮಲಾ, ನಟರಾಜಪ್ಪ, ವೆಂಕಟೇಶಪ್ಪ, ರಮೇಶ್, ಮುನೇಗೌಡ, ಸುಬ್ಬರಾಯಪ್ಪ, ನಂದೀಶ, ಸುರೇಶ್ ಇದ್ದರು.