ಕಾಯ್ದೆಗಳ ತಿದ್ದುಪಡಿ ಮಾರಕ ; ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ

14Tmk_Raitha_Sene
Published on

ತುಮಕೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆಯಂತಹ ಗಂಡಾಂತರ ಕಾಯ್ದೆಗಳನ್ನು ತಿದ್ದುಪಡಿ ಮೂಲಕ ಜಾರಿಗೆ ತರಲು ಹೊರಟಿರುವುದನ್ನು ಹಿಂಪಡೆಯುವಂತೆ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ನಗರದ ಕನ್ನಡ ಭವನದಲ್ಲಿ ಶುಕ್ರವಾರ ರಾಜ್ಯ ಉಪಾಧ್ಯಕ್ಷ ತಿಪಟೂರು ಬಿ.ಎಸ್.ದೇವರಾಜು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಣಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ತಿದ್ದುಪಡಿ ಕಾನೂನು ಜಾರಿಯಾಗಬೇಕಾದರೆ ಜನರ ಮಧ್ಯೆ ಚರ್ಚೆ ಆಗಬೇಕು, ನಂತರ ಶಾಸನಸಭೆ, ಸಂಸತ್ತಿನಲ್ಲಿ ಚರ್ಚೆ ಆಗಿ ಕಾಯ್ದೆ ಆಗಬೇಕು. ಕರೊನಾ ಹಿನ್ನೆಲೆಯಲ್ಲಿ ನಮ್ಮನ್ನು ಮನೆಯಲ್ಲಿಟ್ಟು ಇಂತಹ ಕಾಯ್ದೆಗಳನ್ನು ಏಕೆ ತರಾತುರಿಯಲ್ಲಿ ಜಾರಿಗೆ ತಂದರು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು.

ಜಮೀನುಗಳನ್ನು ಎಂಎನ್‌ಸಿ, ಕಾರ್ಪೋರೇಟ್ ಮಾಫಿಯಾಗಳಿಗೆ ಕೊಟ್ಟು, ನಮ್ಮನ್ನು ಒಕ್ಕಲೆಬ್ಬಿಸಿ ಪಟ್ಟಣಗಳಿಗೆ ಕೂಲಿ ಕೆಲಸಕ್ಕೆ ಕಳುಹಿಸುವಂತಹ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರ ಮಾಡಿವೆ. ಆ ಬಿಳಿ ಬ್ರಿಟಿಷರಿಗೂ ಮತ್ತು ಈ ಕಪ್ಪು ಬ್ರಿಟಿಷರಿಗೂ ಯಾವುದೇ ವ್ಯತ್ಯಾಸವಿಲ್ಲ, ಇವರೂ ಕೂಡ ಬ್ರಿಟಿಷರಂತೆಯೇ ನಮ್ಮ ಕಣ್ಣಿಗೆ ಕಾಣುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ್ರು, ರಾಜ್ಯ ಕಾರ್ಯದರ್ಶಿಗಳಾದ ಅಬ್ಬಣಿ ಶಿವಪ್ಪ, ಕೆಂಕೆರೆ ಸತೀಶ್, ಜಿಲ್ಲಾ ಗೌರವಾಧ್ಯಕ್ಷ ಧನಂಜಯ ಆರಾಧ್ಯ, ತಿಪಟೂರು ಅಧ್ಯಕ್ಷ ರಾಜಣ್ಣ, ಕೊರಟಗೆರೆ ಅಧ್ಯಕ್ಷ ಸಿದ್ಧರಾಜು, ತುರುವೇಕೆರೆ ಅಧ್ಯಕ್ಷ ಹಳೇ ಸಂಪಿಗೆ ಕೀರ್ತಿ, ಕುಣಿಗಲ್ ಅಧ್ಯಕ್ಷ ಅನಿಲ್ ಕುಮಾರ್, ರಾಮನಗರ ಜಿಲ್ಲಾ ಕಾರ್ಯದರ್ಶಿ ಬೈರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನ, ಚಿಕ್ಕನಾಯಕನಹಳ್ಳಿ ಅಧ್ಯಕ್ಷ ಲೋಕೇಶ್, ದಿವಂಗತ ದೇವರಾಜು ಪತ್ನಿ ವಸಂತಮ್ಮ, ಪುತ್ರಿ ಚೈತ್ರಾ ಇದ್ದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ವ್ಯವಸಾಯ ಮತ್ತು ರೈತರನ್ನು ಮನಬಂದಂತೆ ಲೂಟಿ ಮಾಡಲು ನೆರವಾಗಲಿವೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬಂಡವಾಳಸ್ಥರ ಕೈಗೆ ದೇಶವನ್ನು ಕೊಡಲು ಹೊರಟಿದ್ದು, ಕಾರ್ಪೋರೇಟ್ ಕಂಪನಿ, ಎಂಎನ್‌ಸಿ ಕಂಪನಿಗಳನ್ನು ಹಳ್ಳಿಯಿಂದ ಹೊಡೆದೋಡಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯಾಧ್ಯಕ್ಷ, ರೈತ ಸಂಘ ಹಾಗೂ ಹಸಿರುಸೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net