

ವಿಜಯವಾಣಿ ಸುದ್ದಿಜಾಲ ಉಡುಪಿ
ಇತ್ತೀಚೆಗೆ ನಿಧನರಾದ ರಾಜ್ಯ ಬಿಜೆಪಿಯ ಹಿರಿಯ ನಾಯಕ, ವಿ.ಪ. ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಕಿಶೊರಕುಮಾರ್ ಕುಂದಾಪುರ ಮಾತನಾಡಿ, ಕಲೇದ ಲೋಕಸಭಾ ಚುನಾವಣೆಯಲ್ಲಿ ಭಾನುಪ್ರಕಾಶ್ ಅವರು ಕ್ಲಸ್ಟರ್ ಮಟ್ಟದ ಪ್ರಭಾರಿಯಾಗಿದ್ದರು. ಎಲ್ಲ ಕಾರ್ಯಕರ್ತರೊಂದಿಗೆ ಅವರು ಅತ್ಯಂತ ಪ್ರೀತಿಯಿಂದ ವರ್ತಿಸುತ್ತಿದ್ದರು. ವಾಜಪೇಯಿ ಹಾಗೂ ಅಡ್ವಾನಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಸರ್ವಸ್ವವನ್ನೂ ಪಕ್ಷಕ್ಕಾಗಿ ಸಂಘಕ್ಕಾಗಿ ಸಮರ್ಪಿಸಿದ್ದರು. ಅವರ ಆದರ್ಶ, ವ್ಯಕ್ತಿತ್ವ ಪಕ್ಕಷದ ಎಲ್ಲ ಕಾರ್ಯಕರ್ತರಿಗೆ ಬೆಳಕಾಗಿದೆ ಎಂದರು.
ಪಕ್ಷದ ಹಾಗೂ ಸಂಘದ ಕಾರ್ಯಕ್ರಮದಲ್ಲಿ ಸುಂದರವಾಗಿ ಭಾನುಪ್ರಕಾಶ್ ಹಾಡುತ್ತಿದ್ದರು. ಹೀಗಾಗಿ ಅವರ ಸ್ಮರಣೆಗೋಸ್ಕರ ವಿಜಯ್ ಭಟ್ ಕಡೆಕಾರ್ ಅವರು ಯಾವ ಮೋಹನ ಮುರಳಿ ಕರೆಯಿತೋ.. ಎಂಬ ಭಾವಗೀತೆ ಹಾಡಿ ಭಾನುಪ್ರಕಾಶ್ ಅವರಿಗೆ ಸಮರ್ಪಿಸಿದರು.
ಪಕ್ಷದ ಕಾರ್ಯಕರ್ತರು ಒಂದು ನಿಮಿಷ ಮೌನ ಆಚರಿಸಿ, ಭಾನುಪ್ರಕಾಶ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿ ನಮಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ಸಂಧ್ಯಾ ರಮೇಶ್, ನಳಿನಿ ಪಿ. ರಾವ್, ಶ್ಯಾಮಲಾ ಕುಂದರ್, ಕಮಲಾಕ್ಷ ಹೆಬ್ಬಾರ್, ಪ್ರಕಾಶ್ ಶೆಟ್ಟಿ, ಕಿರಣಕುಮಾರ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ಆಸೀಫ್ ಕಟ್ಪಾಡಿ, ದಿನೇಶ್ ಅಮೀನ್, ಚಿನ್ಮಯಮೂರ್ತಿ, ಮಹಾವೀರ್ ಹೆಗ್ಡೆ, ಜಯಶೀಲ್ ಸಾಲಿಯಾನ್, ಮನೋಹರ್ ಕೆ. ಇತರರಿದ್ದರು.
ಜಿಲ್ಲಾ ಪ್ರ.ಕಾರ್ಯದರ್ಶಿ ರೇಶ್ಮಾ ಯು. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.