

ಮಹಾಲಯ ಅಮಾವಾಸೆ: ಹಂಪಿಯಲ್ಲಿ ಭಾರೀ ಜನಸ್ತೋಮ
ಹೊಸಪೇಟೆ: ಸರ್ವ ಪಿತೃ ಮಹಾಲಯ ಅಮಾವಾಸೆ ನಿಮಿತ್ತ ದಕ್ಷಿಣ ಕಾಶಿ ಹಂಪಿಯಲ್ಲಿ ಸಾವಿರಾರು ಭಕ್ತರು ಶನಿವಾರ ಪಿತೃ ದೇವತೆಗಳಿಗೆ ಶ್ರಾದ್ಧಾಕರ್ಮಾಧಿಗಳನ್ನು ನೆರವೇರಿಸಿ, ತರ್ಪಣ ನೀಡಿದರು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಹಿಂಭಾಗದ ತುಂಗಭದ್ರಾ ನದಿ ತಟದ ಸ್ನಾನ ಘಟ್ಟದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ್ದ ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಕ್ಷೇತ್ರದ ಪುರೋಹಿತರ ಮಾರ್ಗದರ್ಶನದಲ್ಲಿ ತಮ್ಮ ಪಿತೃ ದೇವರು, ಹಿರಿಯರಿಗೆ ಪಿಂಡ ಪ್ರದಾನ, ಜಲ ತರ್ಪಣ ಹಾಗೂ ಎಳ್ಳು ನೀರಿನೊಂದಿಗೆ ತಿಲಾಂಜಲಿ ನೀಡುವ ಮೂಲಕ ಶ್ರಾದ್ಧಾ ಕರ್ಮಗಳನ್ನು ಪೂರೈಸಿದರು.
ನಂತರ ಕ್ಷೇತ್ರಾಧಿಪತಿ ಶ್ರೀ ವಿರೂಪಾಕ್ಷೇಶ್ವರ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಪಿತೃಸ ಕಾರ್ಯದ ನಿಮಿತ್ತ ವಿಜಯನಗರ, ಬಳ್ಳಾರಿ, ಕೊಪ್ಪಳ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ನದಿ ತಟದಲ್ಲಿ ಜನ ಜಂಗುಳಿಯಿAದ ಕೂಡಿತ್ತು.