ಒಗ್ಗಟ್ಟು ಪ್ರದರ್ಶಿಸಿದರೆ ಕೋಮುವಾದ ಅಂತ್ಯ

MUDIGERE- motamma (CONGRESS)
Published on

ಮೂಡಿಗೆರೆ: ಮಂಗಳೂರಿನಲ್ಲಿ ದ್ವೇಷದ ಸಂಘರ್ಷ ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದಕ್ಕಿಂತ ಸೌಹಾರ್ದಯುತವಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಕೋಮುವಾದಕ್ಕೆ ಅಂತ್ಯ ಹಾಡಲು ಸಾಧ್ಯ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಜಾತಿ, ಧರ್ಮವನ್ನು ಕಡೆಗಣಿಸಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕರಾವಳಿಯಲ್ಲಿ ನಡೆಯುತ್ತಿರುವ ದುರಂತಗಳಿಗೆ ಅಂತ್ಯ ಹಾಡಬೇಕಾಗಿದೆ. ರೌಡಿಗಳಿಬ್ಬರ ಸಂಘರ್ಷದಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೂ ಪ್ರಕರಣಕ್ಕೆ ಮತೀಯ ಬಣ್ಣ ಲೇಪಿಸಿ, ಸಾಮರಸ್ಯ ಕದಡುವ ಪ್ರಯತ್ನ ನಡೆದಿದೆ. ವೈಯಕ್ತಿಕ ದ್ವೇಷದಿಂದ ಕೊಲೆಯಾದರೂ ಹುತಾತ್ಮರ ಪಟ್ಟಕಟ್ಟುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವೇಷ ಕೆರಳಿಸಿ ರಕ್ತ ಹರಿಸಿ ಲಾಭ ಪಡೆಯುವವರು ಎಲ್ಲ ಧರ್ಮದಲ್ಲಿದ್ದಾರೆ. ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚಿಸುವುದಾಗಿ ಸರ್ಕಾರ ಘೋಷಿಸಿದ್ದು, ಕೋಮು ಹಿಂಸೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಮತ್ತು ದುಷ್ಕೃತ್ಯಗಳ ನಿಗ್ರಹ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಂಡರೆ ಮಾತ್ರ ಪರಿಸ್ಥಿತಿ ಹತೋಟಿಗೆ ಬರಲು ಸಾಧ್ಯ. ಕರಾವಳಿ ಜಿಲ್ಲೆಯ ಘನತೆ ಮತ್ತು ವೈಭವವನ್ನು ಮರಳಿ ತಂದು ಕೊಡುವ ಪ್ರಯತ್ನ ಜನರಿಂದ ಆರಂಭವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net