

ಬಳ್ಳಾರಿ : ರಾಜ್ಯದಲ್ಲಿ ಮೀಸಲಾತಿಗಾಗಿ ಅನೇಕ ಸಮುದಾಯಗಳ ಹೋರಾಟಗಳು ನಡೆಯುತ್ತಿವೆ. ಮೀಸಲಾತಿ ಪಡೆಯಲು ನ್ಯಾಯಯುತವಾಗಿ ಹೋರಾಟ ನಡೆಯಬೇಕಿದೆ. ಆ ಮೂಲಕ ರೆಡ್ಡಿ ಸಮಾಜದಲ್ಲಿ ಒಗ್ಗಟ್ಟಿನ ಪ್ರದರ್ಶನವಾಗಬೇಕಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ರೆಡ್ಡಿ ಜನಸಂಘದ ಆವರಣದಲ್ಲಿ ಭಾನುವಾರ ನಡೆದ ರೆಡ್ಡಿ ಭವನ ನಿರ್ಮಾಣದ ಅಡಿಗಲ್ಲು ಹಾಗೂ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಳತೆ, ರಚನಾತ್ಮಕ ಚಿಂತನೆ, ಮಠಮಾನ್ಯಗಳ ಬೆಂಬಲ ಸಮಾಜಕ್ಕೆ ಬೇಕಾಗುತ್ತದೆ. ಸಮಾಜದ ಯುವ ಪೀಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿಯಬೇಕಾದರೆ ಹೋರಾಟಗಳು ಮಾಡಬೇಕಾಗುತ್ತದೆ ಎಂದರು.
ಮುಂದಿನ 2024ರ ಜ.19 ವೇಮನ ಜಯಂತಿಯಂದು ರೆಡ್ಡಿಭವನದಲ್ಲಿ ಕಾರ್ಯಕ್ರಮ ಆಚರಿಸುವಂತಾಗಬೇಕು. ಸಮಾಜದ ಮಕ್ಕಳಿಗೆ ಅನುಕೂಲವಾಗುಂತೆ ಈ ಭವನ ನಿರ್ಮಾಣಗೊಳ್ಳಬೇಕಿದೆ ಎಂದರು.
ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿ ನಗರದಲ್ಲಿ ಭವ್ಯವಾದ ರೆಡ್ಡಿ ಭವನ ನಿರ್ಮಾಣಗೊಳ್ಳುತ್ತಿದೆ. ಬಹಳ ವರ್ಷಗಳ ಕನಸು ನನಸಾಗುತ್ತಿದೆ. ಎಲ್ಲ ಸಮುದಾಯಗಳ ಭವನಗಳು ನಿರ್ಮಾಣಗೊಂಡಿವೆ. ಆದರೆ ರೆಡ್ಡಿ ಸಮುದಾಯದ ಭವನ ನಿರ್ಮಾಣಗೊಂಡಿಲ್ಲ ಎನ್ನುವುದು ಸಮಾಜದ ಜನರರಲ್ಲಿ ಕೊರಗು ಇತ್ತು. ಅದು ಈಗ ಸಾಕಾರಗೊಂಡಿದೆ ಎಂದು ತಿಳಿಸಿದರು.
ರೆಡ್ಡಿ ಸಮಾಜ ಒಗ್ಗಟ್ಟಾಗಿ ಒಳ್ಳೆಯ ಭಾವನೆಯಿಂದ ಎಲ್ಲ ಪಕ್ಷದಲ್ಲಿರುವ ರಾಜಕೀಯ ನಾಯಕರು ಸಮಾಜದವರನ್ನು ಕೈ ಹಿಡಿದು ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಹಾಗೂ ಬಾಲಕರಿಗಾಗಿ ಪ್ರತ್ಯೇಕ ಹಾಸ್ಟೇಲ್ಗಳ ನಿರ್ಮಾಣ ಮಾಡುವ ಕನಸು ಇದೆ. ಅದಕ್ಕೆ ಶೀಘ್ರದಲ್ಲೇ ಜಾಗ ಹುಡುಕಲಾಗುವುದು ಎಂದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲ ಸಮಾಜಗಳಿಗೂ ಅನುಕೂಲವಾಗುವ ದೃಷ್ಟಿಯಿಂದ ಭವನ ನಿರ್ಮಾಣಗೊಳ್ಳಲಿ. ಎಲ್ಲ ಸಮಾಜದವರಿಗೂ ಸೌಲಭ್ಯ ಸಿಗಲಿ ಎಂದು ಹಾರೈಸಿದರು.
ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಎನ್.ಪ್ರತಾಪರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, 1952ರಲ್ಲಿ ಮೂರು ಎಕರೆ ಜಾಗವನ್ನು ಆಗಿನ ಜಿಲ್ಲಾಧಿಕಾರಿಗಳು ರೆಡ್ಡಿ ಸಮಾಜಕ್ಕೆ ನೀಡಿದ್ದರು. ಅದು ಇದೀಗ ಸಮಾಜದ ಮಕ್ಕಳಿಗೆ ಅನುಕೂಲವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ರೆಡ್ಡಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ನಗರದ ಮಧ್ಯಭಾಗದಲ್ಲಿರುವ ಜಾಗದಲ್ಲಿ ಸಮುದಾಯ ಭವನ ಹಾಗೂ ಮಕ್ಕಳಿಗೆ ಹಾಸ್ಟೇಲ್ ನಿರ್ಮಾಣ ಮಾಡಲಾಗುತ್ತಿದೆ. 10 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣಗೊಳ್ಳುತ್ತಿದೆ. ರಾಜ್ಯದಲ್ಲಿ ರೆಡ್ಡಿ ಸಮಾಜದವರು ಜಾಗೃತರಾಗುತ್ತಿದ್ದಾರೆ ಎಂದು ಗೌರಿಬಿದನೂರಿನ ಶಾಸಕ ಶಿವಶಂಕರರೆಡ್ಡಿ ತಿಳಿಸಿದರು.
ಜಾತಿಗಾಗಿ ಹಣ ವ್ಯಯಿಸಿ
ಜಿಲ್ಲೆಯಲ್ಲಿ ಗಣಿ ಧಣಿಗಳಿದ್ದರೂ ಬಳ್ಳಾರಿಯಲ್ಲಿ ಭವನ ನಿರ್ಮಾಣಕ್ಕೆ ಒದ್ದಾಡುತ್ತಿದ್ದಾರೆ. ತುಂಬಿದ ಲಾರಿಯಿಂದ ಸುರಿದು ಹೋದ ಮೈನಿಂಗ್‌ಗಿಂತ ಡೊಡ್ಡದಲ್ಲ ಭವನ. ಜಾತಿಗಾಗಿ ಹಣ ವ್ಯಯಿಸಿ, ರಾಜಕೀಯಕ್ಕಾಗಿ ಅಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಹೇಳಿದರು.
ಲಾಭದ ನಿರೀಕ್ಷೆ ಮಾಡದೆ ಬಡವರಿಗೆ ಅನುಕೂಲವಾಗುವಂತೆ ಭವನ ನಿರ್ಮಾಣಗೊಳ್ಳಲಿ. ಇಂದಿನ ದುಬಾರಿ ದಿನಗಳಲ್ಲಿ ಮದುವೆ ಮಾಡುವುದು ಕಷ್ಟದ ಕೆಲಸವಾಗಿದೆ. ಮಗಳನ್ನು ಮದುವೆ ಮಾಡುಕೊಡಲು ಪಾಲಕರು ಇರುವ ಜಮೀನನ್ನು ಮಾರುತ್ತಾರೆ. ಮಗಳ ಸುಖಕ್ಕಾಗಿ ಸಾಲ ಮಾಡುತ್ತಾರೆ. ಆ ಸಾಲವನ್ನು ತೀರಿಸಲು ಮನೆಯಲ್ಲಿರುವ ಗಂಡುಮಕ್ಕಳ ಮೇಲೆ ಹೊರೆ ಹಾಕುತ್ತಾರೆ. ಆದ್ದರಿಂದ ದುಂದು ವೆಚ್ಚ ಮಾಡದೇ ಸರಳವಾಗಿ ಮದುವೆ ಮಾಡಿಕೊಡಬೇಕು ಎಂದರು.
ಹರಿಹರ ತಾಲೂಕಿನ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ಶ್ರೀ ವೇಮನಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಜಿಪಂ ಮಾಜಿ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಅರುಣಾ ತಿಪ್ಪಾರೆಡ್ಡಿ, ರೆಡ್ಡಿ ಜನಸಂಘದ ರಾಜ್ಯಾಧ್ಯಕ್ಷ ಜಯರಾಮರೆಡ್ಡಿ, ವೇಮನಪೀಠದ ಅಧ್ಯಕ್ಷ ಡಾ.ಎ.ಐ.ಬಸವರಾಜ ರೆಡ್ಡಿ, ಎಂ.ಕೃಷ್ಣಾರೆಡ್ಡಿ, ಕೆ.ಗೋಪಾಲ್‌ರೆಡ್ಡಿ, ಜಗದೀಶಪ್ಪ ಶಿಂಗನಾಳ್, ಎಂ.ಗೋಪಾಲ್‌ರೆಡ್ಡಿ, ಕೇಶವ ರೆಡ್ಡಿ, ಎಂ.ನಾಗರಾಜ ರೆಡ್ಡಿ ಸೇರಿದಂತೆ ರೆಡ್ಡಿ ಜನಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.