

ಮಡಿಕೇರಿ: ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕೆಂದು ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ.ಚಂದ್ರನ್ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಸಮಿತಿ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಭಾರತದ ರಾಷ್ಟ್ರೀಯ ಚಳುವಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ಕಾಲದಲ್ಲಿ ಆರಂಭವಾಗಿಲ್ಲ. ಸಾವಿರಾರು ವರ್ಷಗಳಿಂದ ಆರಂಭವಾಗಿದೆ. ನಿಜವಾದ ರಾಷ್ಟ್ರಪ್ರೇಮ ಎಂದರೆ ಕಷ್ಟದಲ್ಲಿ ಇರುವವರಿಗೆ ಮತ್ತು ನೆರೆಹೊರೆಯವರಿಗೆ ಸಹಾಯ ಮಾಡುವುದಾಗಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಭಾರತ ಬೆಳೆಯುತ್ತಿರುವ ವೇಗ ನೋಡಿದರೆ ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಸೂಪರ್ ಪವರ್ ದೇಶವಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಎಚ್.ಎಸ್.ವೇಣುಗೋಪಾಲ್, ಆಜಾದಿ ಕಾ ಅಮೃತ ಮಹೋತ್ಸವದ ನೋಡಲ್ ಅಧಿಕಾರಿಯಾದ ಡಾ.ಡಿ.ಕೆ.ಉಷಾ, ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ, ಉಪನ್ಯಾಸಕ ಎಂ.ಕೆ.ಆದಿಲ್, ಜಿ.ಟಿ.ಚೈತ್ರ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.