

ಮಂಗಳೂರು: ತಣ್ಣನೆ ಹರಡಿರುವ ನೀಲ ಸಮುದ್ರದಲ್ಲಿ ಭಯೋತ್ಪಾದಕರ ದಾಳಿ, ಹಡಗಿನಲ್ಲಿ ಬೆಂಕಿ, ಸಂಕಷ್ಟದಲ್ಲಿರುವವರ ರಕ್ಷಣಾ ಕಾರ್ಯಾಚರಣೆ ಮೊದಲಾದ ಧುತ್ತನೆ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಇರುವ ವ್ಯವಸ್ಥೆ ಇಂಡಿಯನ್ ಕೋಸ್ಟ್ಗಾರ್ಡ್.
ತನ್ನ ಸುಸಜ್ಜಿತ ಕಣ್ಗಾವಲು ನೌಕೆಗಳು, ಅತ್ಯಾಧುನಿಕ ಹೆಲಿಕಾಫ್ಟರ್, ಅತಿ ವೇಗದಲ್ಲಿ ತೆರಳಿ ರಕ್ಷಣೆ ಮಾಡಬಲ್ಲ ಇಂಟರ್ಸೆಪ್ಟರ್ ಬೋಟ್ಗಳು ಇವೆಲ್ಲವುಗಳ ಶಕ್ತಿ ಪ್ರದರ್ಶನ ನವ ಮಂಗಳೂರು ಬಂದರು ಪ್ರಾಧಿಕಾರದಿಂದ 15 ನಾಟೇಕಲ್ ಮೈಲು ದೂರದಲ್ಲಿ ಗುರುವಾರ ಅಣಕು ಕಾರ್ಯಾಚರಣೆ ಮೂಲಕ ಅರಬೀ ಸಮುದ್ರದಲ್ಲಿ ನಡೆಯಿತು.
ಮುಂಬಯಿಯ ಕೋಸ್ಟ್ ಗಾರ್ಡ್ ಪ್ರಾದೇಶಿಕ ಪ್ರಧಾನ ಕಚೇರಿ(ಪಶ್ಚಿಮ) ಆಶ್ರಯದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿ ಸಂಖ್ಯೆ 3(ಕರ್ನಾಟಕ) ವತಿಯಿಂದ ಕರ್ನಾಟಕ ಕರಾವಳಿಯಲ್ಲಿ ಪ್ರಾದೇಶಿಕ ಶೋಧ ಮತ್ತು ರಕ್ಷಣಾ ವ್ಯಾಯಾಮ ಯಶಸ್ವಿಯಾಗಿ ನಡೆಯಿತು.
ತುರ್ತು ಸಮಯದಲ್ಲಿ ಕೋಸ್ಟ್ಗಾರ್ಡ್ ನೌಕೆಯಿಂದ ಸಣ್ಣ ಬೋಟನ್ನು ಸಮುದ್ರಕ್ಕಿಳಿಸಿ ಸಮರೋಪಾದಿಯಲ್ಲಿ ಧಾವಿಸಿ ಸಂತ್ರಸ್ತರ ರಕ್ಷಿಸುವ ವಿಶೇಷ ಬಗೆಯ ಕಸರತ್ತು ರೋಚಕ ಅನುಭವವನ್ನು ಕಟ್ಟಿಕೊಟ್ಟಿತು. ಅಪಾಯದ ಮುನ್ಸೂಚನೆ ತೋರಿಸಲು ನೌಕೆಗಳಿಂದ ಸುಡುಮದ್ದು ಮಾದರಿಯ ಬೆಂಕಿಯುಂಡೆ ಹಾರಾಟದ ದೃಶ್ಯ ಗಮನ ಸೆಳೆಯಿತು. ಕಡಲ ಮಧ್ಯೆ ಅಗ್ನಿ ಅವಘಡವಾದಾಗ ಬೆಂಕಿ ನಂದಿಸುವ ಕಾರ್ಯಾಚರಣೆ ಹಾಗೂ ಗಸ್ತು ಕಾರ್ಯಾಚರಣೆಯ ನೌಕೆಯ ಹತ್ತಿರದಿಂದಲೇ ಹೆಲಿಕಾಪ್ಟರ್ ‘ಚೇತಕ್’ ತೆರಳುತ್ತಿದ್ದ ಕ್ಷಣ ಮೈನವಿರೇಳಿಸುವಂತಿತ್ತು. ಕರಾವಳಿ ಗಡಿ ಕಾಯುವಲ್ಲಿ ಕೋಸ್ಟ್ಗಾರ್ಡ್ ಪಾರಮ್ಯ ಹೊಂದಿದೆ ಎಂಬ ಸಂದೇಶವನ್ನು ನೀಡುವ ಜತೆಗೆ ಕೋಸ್ಟ್ ಗಾರ್ಡ್ನ ಸುಮಾರು 300ಕ್ಕೂ ಅಧಿಕ ಸಿಬಂದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದರು.
ಲ್ೈಬಾಯ್ ಡ್ರೋನ್, ಡ್ರೋನಿಯಾರ್: ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಲು ಬಳಸಲು ಲ್ೈ ಜಾಕೆಟ್ವನ್ನು ಪೂರೈಸುವ ಲ್ೈ ಬಾಯ್ ಡ್ರೋನ್ನ ಪ್ರಾತ್ಯಕ್ಷಿಕೆಯೂ ಬಹಳಷ್ಟು ರೋಚಕತೆಯನ್ನು ತಂದುಕೊಟ್ಟಿತು. ಇದೇ ಸಂದರ್ಭ ಡ್ರೋನಿಯಾರ್ ಮೂಲಕ ರಕ್ಷಣೆ ಕಾರ್ಯಾಚರಣೆಯ ಕಸರತ್ತು ವೀಕ್ಷಕರಿಗೆ ರೋಮಾಂಚನ ಉಂಟು ಮಾಡಿತ್ತು. ಎನ್ಸಿಸಿ ಬ್ಯಾಟಲೀಯನ್ಗೆ ಸೇರಿದ ವಿವಿಧ ವಿದ್ಯಾರ್ಥಿಗಳು ಇಂಡಿಯನ್ ಕೋಸ್ಟ್ ಗಾರ್ಡ್ನ ಕಸರತ್ತುಗಳನ್ನು ನೋಡುತ್ತಾ ಸಂಭ್ರಮಿಸಿದರು.
ಡಿಐಜಿ ಡಾ.ಪ್ರಣವ್ ಮೊಹಾಂತಿ, ಐಜಿಪಿ ಅಮಿತ್ ಸಿಂಗ್, ಕೋಸ್ಟ್ಗಾರ್ಡ್ ಜಿಲ್ಲಾ ಹೆಡ್ಕ್ವಾರ್ಟರ್ನ ಡಿಐಜಿ ಪಿ.ಕೆ. ಮಿಶ್ರಾ, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯಿತಿ ಸಿಇಒ ನರ್ವಡೆ ವಿನಾಯಕ ಕಾರ್ಭಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.