ಜನರಿಗೆ ಪ್ರೀತಿ-ವಿಶ್ವಾಸ ತೋರಿಸಿ

Show love and trust to people
Show love and trust to people
Published on

ಜಮಖಂಡಿ: ನಡೆ ನುಡಿ ಚೆನ್ನಾಗಿ ಇಟ್ಟುಕೊಂಡು ಪ್ರೀತಿ, ವಿಶ್ವಾಸ ತೋರಿದರೆ ಮಾತ್ರ ಜನ ನಮ್ಮನ್ನು ಗೌರವಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ನಗರದ ಮುರುಗೋಡ ಕಲ್ಯಾಣ ಮಂಟಪದಲ್ಲಿ ಡಿವೈಎಸ್‌ಪಿ ಶಾಂತವೀರ ಈ. ಅವರ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಾಡುವ ಸೇವೆಯಿಂದ ಇಲಾಖೆಯ ಗೌರವ ಹೆಚ್ಚುತ್ತದೆ. ಅಧಿಕಾರದ ದರ್ಪ ತೋರದೆ ಸಾರ್ವಜನಿಕರೊಂದಿಗೆ ನಂಬಿಕೆ, ವಿಶ್ವಾಸ, ಪರಸ್ಪರ ಸ್ಪಂದಿಸುವ ಅಧಿಕಾರಿಗಳಾಗಬೇಕು. ಆಗ ಮಾತ್ರ ಜನ ನಮ್ಮ ಮುಂದೆ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಆ ಗುಣಗಳನ್ನು ಶಾಂತವೀರ ಅವರು ರೂಢಿಸಿಕೊಂಡಿದ್ದರು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ ಮಾತನಾಡಿ, ಅಧಿಕಾರಿಗಳು ಮನಸ್ಸು ಮಾಡಿದರೆ ಎಂತಹ ಕಠಿಣ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಬಹುದು ಎಂದರು. ನೂತನ ಡಿವೈಎಸ್‌ಪಿ ಸೈಯ್ಯದರೋಷನ್ ಜಮೀರ್ ಎಸ್. ಮಾತನಾಡಿ, ಜಮಖಂಡಿ ತನ್ನದೆಯಾದ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ಇಲ್ಲಿ ಎಲ್ಲ ಸಮಾಜ ಬಾಂಧವರು ಸಾಮರಸ್ಯ, ಸೌಹಾರ್ಧದಿಂದ ಜೀವನ ನಡೆಸುತ್ತಿದ್ದಾರೆ. ಆ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.

ನಿರ್ಗಮಿತ ಡಿವೈಎಸ್‌ಪಿ ಶಾಂತವೀರ ಈ. ಮಾತನಾಡಿ, ಜಮಖಂಡಿ ತಾಲೂಕಿಗೆ ಶಿಕ್ಷಕನಾಗಿ ಬಂದು ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲ್ಲಿಂದಲೇ ಪರೀಕ್ಷೆ ಬರೆದು ಡಿವೈಎಸ್‌ಪಿ ಹುದ್ದೆ ಅಲಂಕರಿಸಿರುವುದಕ್ಕೆ ಈ ತಾಲೂಕಿನ ಸಹೋದರ ಬಾಂಧವರ ಸಹಕಾರವೇ ಮುಖ್ಯ ಕಾರಣ ಎಂದರು. ನನ್ನ ಹುಟ್ಟೂರು ಚಿತ್ರದುರ್ಗ ಜಿಲ್ಲೆಯಾದರೂ ನನ್ನ ತವರು ಮನೆ ಜಮಖಂಡಿ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಈ ನನ್ನ ತವರು ಮನೆ ಬಿಟ್ಟು ಹೋಗುತ್ತೇನೆ ಎಂಬುವುದು ತುಂಬಾ ದು:ಖವೆನಿಸುತ್ತದೆ. ತಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿ ಶೂರ್ಪಾಲಿಯ ಮಣ್ಣಿನ ಋಣ ನನ್ನ ಉಸಿರು ಇರುವವರೆಗೂ ಎಂದು ಮರೆಯುವುದಿಲ್ಲ ಎಂದು ಹೇಳಿದರು.

ರೈತ ಮುಖಂಡ ಬಿ.ಎಸ್. ಸಿಂಧೂರ, ಎಸಿ ಶ್ವೇತಾ ಬೀಡಿಕರ ಮಾತನಾಡಿದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಬಾಗೆನ್ನವರ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಶಾಮರಾವ್ ಘಾಟಗೆ, ರೈತ ಮುಖಂಡ ರಾಜು ನದಾಫ್, ಬನಹಟ್ಟಿ ಪಿಎಸ್‌ಐ ಶಾಂತಾ, ಶ್ರೀವಾಣಿ ಶಾಂತವೀರ ಈ. ಇದ್ದರು.

ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸರಿತಾ ಶಿರಗುಪ್ಪಿ ನಿರೂಪಿಸಿದರು. ಶಿಕ್ಷಕ ಕಾಡು ಹಂಚಿನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net