

ಬೆಂಗಳೂರು: ವಯೋವೃದ್ಧ ಅತ್ತೆ ಮಾವನ ಮೇಲೆ ಅಮಾನಮೀಯವಾಗಿ ಹಲ್ಲೆ ಮಾಡಿ, ಮಕ್ಕಳ ಜೊತೆಗೂಡಿ ಕಿರುಕುಳ ಕೊಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಷೋಕಾಸ್ ನೋಟಿಸ್(Show cause notice issued to doctor who assaulted elderly mother-in-law and father-in-law) ಜಾರಿ ಮಾಡಿದ್ದು ಕೂಡಲೇ ಇದಕ್ಕೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ. ಪ್ರಿಯದರ್ಶಿನಿ ಅವರಿಗೆ ಲಿಖಿತ ಸಮಾಜಾಯಿಷಿ ನೀಡಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ ಇತ್ತೀಚೆಗೆ ತಮ್ಮ ಮಕ್ಕಳ ಜೊತೆಗೂಡಿ ವಯೋವೃದ್ಧ ಅತ್ತೆ, ಮಾವಂದಿರನ್ನು ಥಳಿಸಿದ ವೀಡಿಯೋ ಭಾರಿ ವೈರಲ್ ಆಗಿತ್ತು. ಕಳೆದ ಹತ್ತು ವರ್ಷದಿಂದಲೂ ಡಾ. ಪ್ರಿಯದರ್ಶಿನಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಿಯದರ್ಶಿನಿ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೂ ಅತ್ತೆ ಮಾವನ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಇದು ಇಲಾಖೆಗೆ ತೀವ್ರ ಮುಜುಗರ ತರುವ ವಿಷಯವಾಗಿದ್ದು, ಕೂಡಲೇ ವೈದ್ಯೆ ಪ್ರಿಯದರ್ಶಿನಿಗೆ ಷೋಕಾಸ್ ನೋಟಿಸ್ ನೀಡಿ ವಿವರಣೆ ಪಡೆಯಿರಿ ಎಂದು ಸೂಚಿಸಿದ್ದಾರೆ.
ಈ ಸೂಚನೆ ಬೆನ್ನಲ್ಲೇ ಡಿಎಂಇ ಡಾ. ಸುಜಾತಾ ರಾಥೋಡ್ ನೋಟಿಸ್ ಜಾರಿ ಮಾಡಿದ್ದಾರೆ. ವೃದ್ಧ ಅತ್ತೆ-ಮಾವಂದಿರ ಮೇಲೆ ನಡೆದಿರುವ ಹಲ್ಲೆ ವೀಡಿಯೋ ಮೇರೆಗೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವರ್ತನೆಯು ಸರ್ಕಾರಿ ವೈದ್ಯಾಧಿಕಾರಿಗೆ ತರವಲ್ಲದ್ದಾಗಿದೆ. ಆದ್ದರಿಂದ ಪ್ರಕರಣದ ಕುರಿತು ಲಿಖಿತ ಸಮಜಾಯಿಷಿ ನೀಡಲು ನೋಟಿಸ್ ಜಾರಿ ನೀಡಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೊಹಮದ್ ಮೋಶಿನ್ ಮಾಹಿತಿ ನೀಡಿದ್ದಾರೆ.