ಧ್ಯಾನ್​ಚಂದ್​ರಂತೆ ಕ್ರೀಡಾಸಾಮರ್ಥ್ಯ ಪ್ರದರ್ಶಿಸಿ

29byd1 ISHWARAPPA
Published on

ಬ್ಯಾಡಗಿ: ಕ್ರೀಡಾಪಟುಗಳು ಉತ್ತಮ ಸಾಧನೆ ಮೂಲಕ ರಾಷ್ಟ್ರದ ಗೌರವ ಹೆಚ್ಚಿಸಬೇಕು. ಹಾಕಿ ಆಟಗಾರ ಧ್ಯಾನ್​ಚಂದ್​ರಂತಹ ದೇಶಭಕ್ತಿ ಬೆಳೆಸಿಕೊಂಡು ಕ್ರೀಡಾಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಪಟ್ಟಣದ ಎಸ್​ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮೋಟೆಬೆನ್ನೂರ ಪೇಸ್ ಪಪೂ ಕಾಲೇಜ್ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ದೇಶೀಯ ಆಟವಾಗಿರುವ ಹಾಕಿ, ಕಬಡ್ಡಿಯಂತಹ ಆಟಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ತರಬೇತು ಪಡೆದು, ಗ್ರಾಮೀಣ ಪ್ರದೇಶದ ಕೀರ್ತಿಯನ್ನು ನಾಡಿಗೆ ಒಯ್ಯಬೇಕು. ಹಾಕಿ ಮಾಂತ್ರಿಕ ಧ್ಯಾನ್​ಚಂದ್​ಗೆ ಜರ್ಮನಿ ಸಾಕಷ್ಟು ಆಮಿಷ ಒಡ್ಡಿದರೂ ರಾಷ್ಟ್ರದ ಗೌರವಕ್ಕೆ ಚ್ಯುತಿಯಾಗದಂತೆ ತಮ್ಮ ದೇಶಭಕ್ತಿ ಪ್ರದರ್ಶಿಸಿರುವುದು ಹೆಮ್ಮೆಯಾಗಿದೆ ಎಂದರು.

ಬ್ಯಾಡಗಿಯ ರವಿಶೆಟ್ಟಿ ಉತ್ತಮ ಕಬಡ್ಡಿ ಆಟಗಾರನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾರೆ. ಈಗ ಥೈಲ್ಯಾಂಡನಲ್ಲಿ ತರಬೇತುದಾರರಾಗಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಕಬಡ್ಡಿ ಕುರಿತು ಇಬ್ಬರು ಡಾಕ್ಟರೇಟ್ ಪಡೆದಿದ್ದು, 150ಕ್ಕೂ ಹೆಚ್ಚು ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದಾರೆ ಎಂದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಆದರೆ ಗೆಲುವು ಲಭಿಸಿದಾಗ ನಾವು ಅನುಭವಿಸುವ ಖುಷಿಯನ್ನು ಸೋತಾಗಲೂ ಉಳಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಕಬಡ್ಡಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿದರು. ಬಿಜೆಪಿ ಮಹಿಳಾ ತಾಲೂಕಾಧ್ಯಕ್ಷೆ ವಿದ್ಯಾಶೆಟ್ಟಿ, ವಿದ್ಯಾಶೆಟ್ಟಿ, ಪೇಸ್ ಕಾಲೇಜು ಕಾರ್ಯದರ್ಶಿ ಕೆ.ಇ. ಕಾಂತೇಶ, ಮೋಟೆಬೆನ್ನೂರ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಗಂಗಾಧರ ನಾಯಕ, ಪ್ರಾಚಾರ್ಯ ಎಂ. ಬೀರಪ್ಪ, ಶಿವಾನಂದ ಬೆನ್ನೂರ, ಆನಂದ ಮುದಕಮ್ಮನವರ, ಎಂ.ಎನ್. ಮಾಚೇನಹಳ್ಳಿ, ಕೆ.ಪಿ.ಬ್ಯಾಡಗಿ, ಎಸ್.ಆರ್. ನಾಗವಂದ, ಉದಯ ಮಂಜುನಾಥ ಅಡೇಮನೆ, ಲಕ್ಷ್ಮೀ ಗುರವರ, ರಾಜೇಶ್ವರಿ ಹೊಂಗಲಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net