

ಅವಿನಾಶ್ ಜೈನಹಳ್ಳಿ ಮೈಸೂರು
ಪ್ರಪಂಚದಾದ್ಯಂತ ಯೋಗದ ಕಂಪನ್ನು ಪಸರಿಸುತ್ತಾ ಬಂದಿರುವ ಮೈಸೂರಿನಲ್ಲಿ ‘ಯೋಗ ವಿಶ್ವವಿದ್ಯಾಲಯ’ ಹಾಗೂ ‘ಯೋಗ ಕನ್ವೆನ್ಷನ್ ಸೆಂಟರ್’ ಆರಂಭಿಸಬೇಕೆಂಬ ಒತ್ತಾಯವೂ ಜೋರಾಗಿದ್ದು, ಮೊದಲ ಹಂತದಲ್ಲಿ ‘ಯೋಗ ಕನ್ವೆನ್ಷನ್ ಸೆಂಟರ್’ ಆರಂಭಿಸಲು ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಕಳೆದ ವರ್ಷ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಯೋಗ ಪ್ರದರ್ಶಿಸಿದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನ ಯೋಗ ಕ್ಷೇತ್ರ ಮತ್ತಷ್ಟು ಪ್ರಜ್ವಲಿಸುತ್ತಿದೆ. ಯೋಗ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಮ್ಮ ಮಕ್ಕಳಿಗೂ ಯೋಗ ಕಲಿಸಬೇಕು ಎಂದು ಪಾಲಕರು ಚಡಪಡಿಸುತ್ತಿದ್ದಾರೆ. ಯುವಕರು ದೈಹಿಕ ಮತ್ತು ಮಾನಸಿಕ ಫಿಟ್ನೆಸ್‌ಗಾಗಿ ಯೋಗದತ್ತ ಮುಖ ಮಾಡಲು ಶುರು ಮಾಡಿದ್ದಾರೆ.
ನಗರದಲ್ಲಿ ನಿತ್ಯ 15 ರಿಂದ 20 ಸಾವಿರ ಜನ ಯೋಗಾಭ್ಯಾಸ ಮಾಡುತ್ತಿದ್ದಾರೆ. ಆದರೆ ಎಲ್ಲರೂ ಒಂದೆಡೆ ಸೇರಿ ಯೋಗ ಮಾಡಲು, ವಿಚಾರ ವಿನಿಮಯ, ಸಂಶೋಧನೆ ನಡೆಸಲು ಸೂಕ್ತವಾದ ಯೋಗ ಸಮುದಾಯ ಕೇಂದ್ರ ಇಲ್ಲ. ಹಾಗಾಗಿ, ಮೈಸೂರಿನಲ್ಲಿ ಯೋಗ ಕನ್ವೆನ್ಷನ್ ಸೆಂಟರ್ ಜತೆಗೆ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಒತ್ತಾಯ ಯೋಗ ಫೆಡರೇಷನ್ ಆಫ್ ಮೈಸೂರು ಪದಾಧಿಕಾರಿಗಳಿಂದ ಹಾಗೂ ಮೈಸೂರಿನ ಯೋಗಗುರುಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಯೋಗವನ್ನು ಬ್ರ್ಯಾಂಡ್ ಮಾಡುವ ಜತೆಗೆ ಅದರ ಅನುಕೂಲವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಮೈಸೂರಿನಲ್ಲಿ ಯೋಗ ಕನ್ವೆನ್ಷನ್ ಸೆಂಟರ್ ಆರಂಭಿಸಬೇಕು ಎಂದು ಮೈಸೂರಿನ ಹಿರಿಯ ಯೋಗಗುರುಗಳು ಹಾಗೂ ಯೋಗ ಫೆಡರೇಷನ್ ಆಫ್ ಮೈಸೂರು ಸಂಸ್ಥೆ ಪದಾಧಿಕಾರಿಗಳು ಈಗಾಗಲೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕೂಡ ಪ್ರಮುಖ ಯೋಗಗುರುಗಳ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
‘ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಸಿ ಯೋಗ ಕನ್ವೆನ್ಷನ್ ಸೆಂಟರ್‌ನ ಸ್ವರೂಪ, ವಿನ್ಯಾಸ, ನಿರ್ಮಾಣದ ಸ್ಥಳ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಯೋಗ ಪರಂಪರೆ ಹೊಂದಿರುವ ಮೈಸೂರಿನಲ್ಲಿ ಈಗ ವಿವೇಕಾನಂದ ಯೋಗ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆ, ಅಷ್ಟಾಂಗ ಯೋಗ ವಿದ್ಯಾಲಯ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಶಿಕ್ಷಣ, ಮಾರುತಿ ಯುವ ಕೇಂದ್ರ, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್, ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ. ಹಾಗಾಗಿ ಸಾವಿರಾರು ಜನ ಒಟ್ಟಿಗೆ ಸೇರಿ ಯೋಗ, ಧ್ಯಾನ ಸೇರಿದಂತೆ ಇತರ ಚಟುವಟಿಕೆ ಮಾಡಲು ‘ಯೋಗ ಕನ್ವೆನ್ಷನ್ ಸೆಂಟರ್’ ಅವಶ್ಯಕತೆ ಇದೆ. ಸೆಂಟರ್ ಸ್ಥಾಪನೆಯಾದರೆ ಏಕಕಾಲದಲ್ಲಿ ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ಮಾಡಬಹುದು. ಭವಿಷ್ಯದಲ್ಲಿ ಈ ಯೋಗ ಸೆಂಟರ್ ಅನ್ನು ವಿವಿಯಾಗಿಯೂ ವಿಸ್ತರಿಸಬಹುದು. ವಿಚಾರಸಂಕಿರಣ, ಸಂಶೋಧನೆ ನಡೆಸಬಹುದು. ಯೋಗ, ಪ್ರಾಣಾಯಾಮವನ್ನು ಪ್ರತ್ಯೇಕವಾಗಿ ಕಲಿಸಬಹುದು. ಯೋಗವನ್ನು ಬ್ರ್ಯಾಂಡ್ ಆಗಿ ಪ್ರಚುರಪಡಿಸಬಹುದು. ಯೋಗಾಸಕ್ತಿ ಇರುವ ವಿದೇಶಿಗರನ್ನು ಮೈಸೂರಿನ ಕಡೆ ಸೆಳೆಯಬಹುದಾಗಿದೆ ಎನ್ನುವುದು ಯೋಗ ಫೆಡರೇಷನ್ ಆಫ್ ಮೈಸೂರು ಪದಾಧಿಕಾರಿಗಳ ಅಭಿಪ್ರಾಯವಾಗಿದೆ.
ಕರೊನಾ ಬರುವುದಕ್ಕೂ ಮುನ್ನ ಮೈಸೂರಿನಲ್ಲಿ ನಿತ್ಯ 2000 ಮಂದಿ ವಿದೇಶಿಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಯೋಗ ಕಲಿಯುತ್ತಿದ್ದರು. ಪ್ರವಾಸೋದ್ಯಮ, ಶಿಕ್ಷಣದ ಜತೆಗೆ ಯೋಗ ಕಲಿಯುವುದಕ್ಕಾಗಿಯೇ ವಿದೇಶಿಯರು ಮೈಸೂರಿಗೆ ಬರುತ್ತಿದ್ದರು. ಆದರೀಗ ವಿದೇಶಿಗರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯ ಅನೇಕ ಯೋಗಾಪಟುಗಳು ಪ್ರಪಂಚದ ನಾನಾ ಮೂಲೆಗಳಲ್ಲಿ ಯೋಗ ತರಗತಿ ನಡೆಸುತ್ತಿರುವುದು ಮತ್ತೊಂದು ವಿಶೇಷ.
ಮೈಸೂರು ಪ್ರಪಂಚದಲ್ಲೇ ‘ಅಷ್ಟಾಂಗ ವಿನ್ಯಾಸ ಯೋಗ’ದಲ್ಲಿ ಹೆಚ್ಚು ಹೆಸರು ಮಾಡಿದೆ. ಇಲ್ಲಿ ಅಪಾರ ಅನುಭವಿ ಯೋಗ ಶಿಕ್ಷಕರು, ಯೋಗಪಟುಗಳಿದ್ದಾರೆ. ವರ್ಷ ಪೂರ್ತಿ ಅನೇಕ ರೀತಿಯ ಯೋಗ ಸ್ಪರ್ಧೆಗಳು, ಯೋಗ ಶಿಬಿರಗಳು, ಯೋಗ ತರಗತಿಗಳು ನಡೆಯುತ್ತಲೇ ಇರುತ್ತವೆ. ನಗರದ ಅನೇಕ ಯೋಗಾಪಟುಗಳು ಚೀನಾ, ಜಪಾನ್, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಯೋಗ ಕಲಿಸುತ್ತಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ನಂಜನಗೂಡು ಮಹೇಂದ್ರ, ಶ್ರೀಕಂಠ, ಕಿರಣ್, ಸುಶ್ಮಿತಾ, ಸುರೇಶ್, ವಿಕ್ರಂ, ಭಾಗ್ಯ, ಪ್ರೇಮಾ, ಜನಾರ್ದನ್, ಖುಷಿ ಸೇರಿದಂತೆ ಅಪಾರ ಯೋಗ ಪ್ರತಿಭೆಗಳೂ ಇದ್ದಾರೆ.
ಮೈಸೂರಿನಲ್ಲಿ ‘ಯೋಗ ವಿಶ್ವವಿದ್ಯಾಲಯ’ ಹಾಗೂ ‘ಯೋಗ ಕನ್ವೆನ್ಷನ್ ಸೆಂಟರ್’ ಆರಂಭಿಸಬೇಕು ಎಂದು ಅನೇಕ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಸಾವಿರಾರು ಜನರು ಒಟ್ಟಿಗೆ ಸೇರಿ ಯೋಗ, ಧ್ಯಾನ ಸೇರಿದಂತೆ ಇತರ ಚಟುವಟಿಕೆ ಮಾಡಲು ‘ಯೋಗ ಕನ್ವೆನ್ಷನ್ ಸೆಂಟರ್’ ಅವಶ್ಯಕತೆ ಇದೆ. ಆದಷ್ಟು ಬೇಗ ಯೋಗ ವಿಶ್ವವಿದ್ಯಾಲಯವನ್ನು ಆರಂಭಿಸಲು ಸರ್ಕಾರ ಮುಂದಾಗಬೇಕು.ಡಾ.ಪಿ.ಎನ್. ಗಣೇಶ್‌ಕುಮಾರ್, ಕಾರ್ಯದರ್ಶಿ ಯೋಗ ಫೆಡರೇಷನ್ ಆಫ್ ಮೈಸೂರು ಶೀಘ್ರದಲ್ಲೇ ಯೋಗ ಗುರುಗಳು ಹಾಗೂ ಯೋಗ ಫೆಡರೇಷನ್ ಆಫ್ ಮೈಸೂರು ಪದಾಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ಕರೆಯಲಾಗುತ್ತದೆ. ಸಭೆಯಲ್ಲಿ ಚರ್ಚೆ ನಡೆಸಿ ಯೋಗ ಕನ್ವೆನ್ಷನ್ ಸೆಂಟರ್ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.ಎಂ.ಕೆ. ಸವಿತಾ, ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ