

ಮಡಿಕೇರಿ:
ಪ್ರವಾಸಿ ಜಿಲ್ಲೆಯಾಗಿ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಸ್ಥಳೀಯ ಪ್ರಾಕೃತಿಕ ಸೌಂದರ್ಯವೇ ಪ್ರವಾಸಿಗರ ಪಾಲಿನ ದೊಡ್ಡ ಆಕರ್ಷಣೆ. ಇದರ ಹೊರತಾಗಿಯೂ ಜಿಲ್ಲೆಯತ್ತ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ಸಾಕಷ್ಟು ಅವಕಾಶಗಳು ಇಲ್ಲಿವೆ. ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಹಲವರು ಕಾಳಜಿ ತೋರಿಸುತ್ತಿದ್ದು, ಸ್ವಂತ ಆಸಕ್ತಿಯಿಂದ ಅಲ್ಲಲ್ಲಿ ವಿವಿಧ ಪ್ರಯೋಗಗಳು ನಡೆಯುತ್ತಿದ್ದು, ಯಶಸ್ವಿಯೂ ಆಗಿದೆ. ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಬಗ್ಗೆ ಮಾಹಿತಿ ಕೊಡುವ ಮ್ಯೂಸಿಯಂ ಜಿಲ್ಲೆಯಲ್ಲಿ ಆರಂಭವಾದರೆ ಪ್ರವಾಸೋದ್ಯಮ ಮತ್ತು ಕಾಫಿ ಉದ್ಯಮಕ್ಕೆ ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಕೊಡಗಿನ ಒಟ್ಟು ೪೧೦೬ ಚಕಿಮೀ ಭೂಪ್ರದೇಶದ ಪೈಕಿ ೧೧೯೭ ಚಕಿಮೀ ಪ್ರದೇಶದಲ್ಲಿ ಕಾಫಿ ತೋಟಗಳಿವೆ. ಕರ್ನಾಟಕದ ಒಟ್ಟು ಕಾಫಿ ಬೆಳೆಯುವ ಪ್ರದೇಶದಲ್ಲಿ ಶೇ. ೪೪ರಷ್ಟು ಅಂದರೆ ೧,೦೬,೦೨೧ ಹೆಕ್ಟೇರ್ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಕಾಫಿ ಬೆಳೆಯಲಾಗುತ್ತದೆ. ಇಲ್ಲಿಯ ಬಹುತೇಕ ಬೆಳೆಗಾರರು ೧೦ ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ತೋಟಗಳನ್ನು ಹೊಂದಿದ್ದು ವಾರ್ಷಿಕವಾಗಿ ೧,೧೦,೭೩೦ ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುತ್ತದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಕಾಫಿಯಲ್ಲಿ ಶೇ. ೫೦ರಷ್ಟು ಭಾಗ ಮತ್ತು ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ. ೩೫ರಷ್ಟು ಭಾಗ ಕಾಫಿ ಕೊಡಗಿನ ಬೆಳೆಗಾರರು ಬೆಳೆಯುತ್ತಾರೆ.
ಕಾಫಿ ಕೃಷಿ ಅತ್ಯಧಿಕ ಕಾರ್ಮಿಕರನ್ನು ಬಯಸುವ ಬೆಳೆಯಾಗಿದ್ದು ಶೇ.೫೧ರಷ್ಟು ಉದ್ಯೋಗವನ್ನು ಕಾಫಿ ತೋಟಗಳು ಸೃಷ್ಟಿ ಮಾಡಿವೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳಲ್ಲಿ ರೋಬಸ್ಟಾ ಕಾಫಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಅರೆಬಿಕಾ ಕಾಫಿ ಬೆಳೆಯಲು ಆದ್ಯತೆ ಕೊಡಲಾಗಿದೆ. ಜಿಲ್ಲೆಯ ಜತೆಗೆ ಇಷ್ಟೆಲ್ಲಾ ಅವಿನಾಭಾವ ಸಂಬಂಧ ಹೊಂದಿಕೊಂಡಿದ್ದು, ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಕಾಫಿ ಬೆಳೆ ಮತ್ತು ಕಾಫಿ ಸಂಸ್ಕೃತಿ ಬಗ್ಗೆ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ ಕೊಡಲು ಸುಸಜ್ಜಿತ ಮ್ಯೂಸಿಯಂ ಒಂದರ ಅಗತ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಚಿಕ್ಕಮಗಳೂರಿನಲ್ಲಿ ಕಾಫಿ ಮಂಡಳಿ ವತಿಯಿಂದ ಕಾಫಿ ಮ್ಯೂಸಿಯಂ ಆರಂಭಿಸಲಾಗಿದೆ. ಚಿಕ್ಕಮಗಳೂರಿಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಬಹುತೇಕರು ಈ ಮ್ಯೂಸಿಯಂಗೆ ತೆರಳಿ ಕಾಫಿ ಬಗ್ಗೆ ಮಾಹಿತಿ ಪಡೆಯುವುದು ಸಾಮಾನ್ಯವಾಗಿದೆ. ಈ ಮ್ಯೂಸಿಯಂ ಕಾಫಿ ಉದ್ಯಮದ ಅನನ್ಯ ಸಂಗ್ರಹ ಎಂದು ಬಿಂಬಿಸಲಾಗುತ್ತಿದ್ದು, ಕಾಫಿ ಬೆಳೆಯುವುದರಿಂದ ಆರಂಭವಾಗಿ ಅದರ ಬೇಳೆ ತಯಾರಿಕೆ, ಹದವಾಗಿ ಹುರಿದು ಪುಡಿ ಮಾಡುವುದು, ಸ್ವಾದಿಷ್ಟ ಕಾಫಿ ಪೇಯ ತಯಾರಿಕೆ ತನಕದ ಸಮಗ್ರ ಮಾಹಿತಿ ಈ ಮ್ಯೂಸಿಯಂನಲ್ಲಿ ಸಿಗುತ್ತದೆ.
ಕಾಫಿಯ ಮೂಲ, ಇದು ಭಾರತಕ್ಕೆ ಕಾಲಿಟ್ಟ ಬಗೆ, ಕರ್ನಾಟಕದಲ್ಲಿ ಹೇಗೆ ಇದನ್ನು ಬೆಳೆಯಲಾರಂಭಿಸಲಾಯಿತು ಮತ್ತಿತರ ವಿವರಗಳನ್ನು ನೀಡುವ ಸಾಕ್ಷ್ಯ ಚಿತ್ರವನ್ನೂ ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಕಾಫಿ ಸಂಸ್ಕರಣೆ, ಕಾಫಿ ಬೆಳೆಯುವ ಸಾಂಪ್ರದಾಯಿಕ ಪ್ರದೇಶಗಳು, ಕಾಫಿ ಬೆಳೆಯುವ ಪ್ರದೇಶಗಳಿಗೆ ಅನುಗುಣವಾಗಿ ಅವುಗಳ ಗುಣಲಕ್ಷಣಗಳು, ಗುಣಮಟ್ಟ, ಕಾಫಿ ವರ್ಗೀಕರಣ, ಕಾಫಿ ಉದ್ಯಮದಲ್ಲಿ ಬಳಸುವ ಯಂತ್ರೋಪಕರಣಗಳು ಮತ್ತಿತರ ವಿಷಯಗಳ ಬಗ್ಗೆಯೂ ಇಲ್ಲಿ ಮಾಹಿತಿ ಸಿಗುತ್ತದೆ. ಇಂಥ ಒಂದು ಪರಿಪೂರ್ಣ ಮ್ಯೂಸಿಯಂ ಕೊಡಗಿನಲ್ಲೂ ಆರಂಭವಾಗಬೇಕಿದೆ ಎನ್ನುತ್ತಾರೆ ಇಲ್ಲಿಯ ಕಾಫಿ ಬೆಳೆಗಾರು.
ಕೊಡಗಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈಗಾಗಲೇ ಪ್ರವಾಸಿ ಜಿಲ್ಲೆಯಾಗಿಯೂ ಗುರುತಿಸಿಕೊಂಡಿರುವುದರಿಂದ ಕಾಫಿ ಮ್ಯೂಸಿಯಂ ಆದಷ್ಟು ಶೀಘ್ರ ಆರಂಭಿಸುವ ಬಗ್ಗೆ ಕಾಫಿ ಮಂಡಳಿ ಕಾರ್ಯೋನ್ಮುಖವಾಗಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಸಂಬಂಧ ಕಾಫಿ ಮಂಡಳಿ ೨೦೧೫ರಿಂದಲೇ ಪ್ರಕ್ರಿಯೆ ಶುರು ಮಾಡಿದೆ. ಜಾಗ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನೂ ಕಳಿಸಲಾಗಿದೆ. ನೂತನ ಜಿ.ಪಂ. ಕಚೇರಿ ಬಳಿ ೧ ಎಕರೆ ಜಾಗ ಗುರುತಿಸಲಾಗಿದ್ದರೂ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳಿಂದಾಗಿ ಇನ್ನೂ ಅದು ಕಾಫಿ ಮಂಡಳಿಗೆ ಸಿಕ್ಕಿಲ್ಲ. ಸೂಕ್ತ ಸ್ಥಳ ಸಿಕ್ಕಿದರೆ ಮ್ಯೂಸಿಯಂ ಆರಂಭ ಮಾಡುವುದಕ್ಕೆ ಕಾಫಿ ಮಂಡಳಿಯೂ ಆಸಕ್ತಿ ತೋರಿಸುತ್ತಿದೆ.