ಹಿಂದುಗಳ ಭಾವನೆಗೆ ಧಕ್ಕೆಯಾದರೆ ಸುಮ್ಮನಿರಬೇಕೆ?

Prahalad Joshi
Published on

ಹುಬ್ಬಳ್ಳಿ: ಧರ್ಮಸ್ಥಳ ನಮ್ಮ ಸ್ವಂತ ಸ್ವತ್ತು ಎಂದು ನಾವು ಹೇಳಿಯೇ ಇಲ್ಲ. ಹಿಂದುಗಳ ಭಾವನೆಗೆ ಧಕ್ಕೆಯಾದರೆ ನಾವೆಲ್ಲರೂ ಸುಮ್ಮನಿರಬೇಕೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವರೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು (ಕಾಂಗ್ರೆಸ್) ದೇಶದ ಗುಡಿ-ಗುಂಡಾರ ಹೊಡೆಯುವ ಪ್ರಯತ್ನ ಮಾಡಿದ್ದೀರಿ. ಮುಸ್ಲಿಂ ಲೀಗ್ ಸೇರಿ ಹಲವು ಮುಸ್ಲಿಂ ಸಂಘಟನೆಗಳೊಂದಿಗೆ ನಿಮ್ಮ ಸಂಪರ್ಕವಿದೆ ಎಂದು ಆರೋಪಿಸಿದರು.

ಧರ್ಮಸ್ಥಳ ವಿಷಯವಾಗಿ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳುವ ಮೂಲಕ ಎರಡು ದಡದ ಮೇಲೆ ಕಾಲಿಟ್ಟು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಜರಿದರು.

ರಾಮೇಶ್ವರಂ ಕೆಫೆ ಸ್ಪೋಟವಾದಾಗ ಭಯೋತ್ಪಾದನೆ ಕೃತ್ಯವಲ್ಲವೆಂದರು. ಅದೇ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. ಇದುವರೆಗೂ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದರು.

ಸ್ವತಂತ್ರ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರವಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಕಾಂಗ್ರೆಸ್‌ನವರು ಅಯೋಗ್ಯರು. ಅವರು ಆಡಳಿತ ನಡೆಸಲು ಯೋಗ್ಯರಲ್ಲ. ಮೂಲ ಕಾಂಗ್ರೆಸ್ ಅನ್ನು ಕಬಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ನವರು ನುಸುಳುಕೋರರರು. ಅವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್‌ಅಲ್ಲ. ಕಾಂಗ್ರೆಸ್ ಅಂದರೆ ನೀವೇನಾ? ಎಂದು ಕಿಡಿಕಾರಿದರು.

ನೇತಾಜಿ ಸುಭಾಷಚಂದ್ರ ಬೋಸ್ ಅವರನ್ನು ಯಾವ ರೀತಿ ನಡೆಸಿಕೊಂಡಿದೆ ಕಾಂಗ್ರೆಸ್ ಎಂಬುದು ಗೊತ್ತಿದೆ. ಇಂದಿರಾಗಾಂಧಿ ಅವರಿಗಿಂತ ಹತ್ತುಪಟ್ಟು ನೇತಾಜಿ ತ್ಯಾಗ ಮಾಡಿದ್ದಾರೆ. ಸರ್ಕಾರಿ ಯೋಜನೆಗಳಿಗೆ ಎಷ್ಟು ಜನರ ಹೆಸರು ಇಟ್ಟಿದ್ದೀರಿ?. ಬರೀ ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರು ಇಟ್ಟಿದ್ದೀರಿ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net