

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ನಾಗರಿಕ ಸೇವೆಗಳ ಮುಖ್ಯಪರೀಕ್ಷೆ ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮುಖ್ಯ ಪರೀಕ್ಷೆಗಳ ನಡುವೆ ಹೆಚ್ಚಿನ ಅಂತರ ಇಲ್ಲದಂತೆ ವೇಳಾಪಟ್ಟಿ ರೂಪಿಸಿರುವುದು, ಎರಡೂ ಪರೀಕ್ಷೆಗಳಿಗೆ ಸಿದ್ಧರಾಗಿರುವ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಯುಪಿಎಸ್ಸಿ ಪರೀಕ್ಷೆಗಳು ಜ.8 ರಿಂದ 10 ಹಾಗೂ 16, 17ರಂದು ನಡೆಯಲಿವೆ. ಕೆಪಿಎಸ್ಸಿ ಪರೀಕ್ಷೆಗಳು ಡಿ.21 ರಿಂದ 24 ಮತ್ತು ಜ.2ರಿಂದ 5ರವರೆಗೆ ನಿಗದಿಯಾಗಿವೆ. ಆದರೆ ಎರಡೂ ಪರೀಕ್ಷೆಗಳ ನಡುವೆ ಅಂತರ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಕೆಪಿಎಸ್ಸಿ ವೇಳಾಪಟ್ಟಿಯನ್ನು ಪರಿಷ್ಕೃರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಕೆಪಿಎಸ್ಸಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ಮುಖ್ಯಪರೀಕ್ಷೆ ಡಿ.21ರಿಂದ 24ರವರೆಗೆ ಹಾಗೂ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ಮುಖ್ಯ ಪರೀಕ್ಷೆ ೆ ಜ.2ರಿಂದ 5ರವರೆಗೆ ನಿಗದಿಯಾಗಿದೆ. ಜನವರಿಯಲ್ಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್ನಲ್ಲಿ ಪೂರ್ವ ಭಾವಿ ಪರೀಕ್ಷೆ ನಡೆಸಿ, ಇತ್ತೀಚಿಗೆ ಫಲಿತಾಂಶ ಬಿಡುಗಡೆ ಮಾಡಲಾಗಿತ್ತು.
ಎರಡೂ ಒಂದೇ ಅಲ್ಲ: ಯುಪಿಎಸ್ಸಿ ಪರೀಕ್ಷೆಗಳಿಗೆ ಸಿದ್ಧರಾಗುವವರು ಕೆಎಎಸ್ ಪರೀಕ್ಷೆಗಳಿಗೂ ಸಿದ್ಧತೆ ನಡೆಸಿರುತ್ತಾರೆ. ಆದರೆ ತಯಾರಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ನಿರಂತರವಾಗಿ ಪರೀಕ್ಷೆಗಳನ್ನು ಎದುರಿಸಬೇಕಾದಾಗ
ಎದುರಿಸುವ ತೊಂದರೆಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿ ಪಡಿಸಬೇಕಿತ್ತು ಎಂಬುದು ಅಭ್ಯರ್ಥಿಗಳ ಆಗ್ರಹವಾಗಿದೆ. ಈ ವಿಚಾರವಾಗಿ ಕೆಪಿಎಸ್ಸಿ ಕಾರ್ಯದರ್ಶಿ ಪ್ರತಿಕ್ರಿಯೆ ಪಡೆಯಲು ಸಂರ್ಪಸಿದ್ದು, ಕರೆ ಸ್ವೀಕರಿಸಲಿಲ್ಲ.
ಎರಡು ಪರೀಕ್ಷೆಗಳಿಗೂ ಏಕಕಾಲದಲ್ಲಿ ಸಿದ್ಧತೆ ನಡೆಸುವುದು ಕಷ್ಟ. ಇದರಿಂದ ಯಾವ ಪರೀಕ್ಷೆಯನ್ನೂ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಕೆಪಿಎಸ್ಸಿ ಅರ್ಜಿ ಆಹ್ವಾನಿಸುವುದೇ ಕಡಿಮೆ. ಇಂತಹ ಸಮಯದಲ್ಲಿ ಈ ರೀತಿ ಮಾಡಿದರೆ ಕೆಎಎಸ್ ಅಧಿಕಾರಿಯಾಗುವ ಕನಸು ನನಸಾಗದು. | ನೊಂದ ಅಭ್ಯರ್ಥಿ