ರಾಜ್ಯಾದ್ಯಂತ ಶೀಘ್ರವೇ ಮನೆಗಳ ಉದ್ಘಾಟನೆ

h13-Zameer Ahamed 1
Published on

ಹುಬ್ಬಳ್ಳಿ: ಆಶ್ರಯ ಮನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಏ. 27ರಂದು ಮಾಡಲು ನಿರ್ಧರಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ನಂತರ ಮತ್ತೊಮ್ಮೆ ದಿನಾಂಕ ನಿಗದಿಪಡಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ನಗರದ ಮಂಟೂರ ರಸ್ತೆಯಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ ಆಶ್ರಯ ಮನೆಗಳನ್ನು ಭಾನುವಾರ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಚುರ್ರ್ವಲ್ ಮೂಲಕ ರಾಜ್ಯಾದ್ಯಂತ ಮನೆಗಳನ್ನು ಉದ್ಘಾಟಿಸಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲಿ 48,760 ಮನೆಗಳನ್ನು ರಾಜೀವಗಾಂಧಿ ಆವಾಸ್ ಯೋಜನೆಯಡಿ ಮಂಜೂರು ಮಾಡಲಾಗಿತ್ತು. ಇಷ್ಟು ಮನೆಗಳಿಗೆ 2,100 ಕೋಟಿ ರೂ. ಫಲಾನುಭವಿಗಳಿಂದ ಬರಬೇಕಿತ್ತು. ಆದರೆ 109 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಸುಮಾರು 60 ಸಾವಿರ ಕೋಟಿ ರೂ. ವೆಚ್ಚದ ಗ್ಯಾರಂಟಿ ಯೋಜನೆಗಳ ನಡುವೆಯೂ ಬಡವರು ಆಶ್ರಯದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ 9,500 ಕೋಟಿ ರೂ. ಅನುದಾನವನ್ನು ಸರ್ಕಾರ ಕೊಡಲು ಮುಂದಾಗಿದೆ. ಆದಷ್ಟು ಬೇಗ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹೀಗಾಗಿ ಬರುವ ವರ್ಷದೊಳಗೆ 2.30 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ಹಣ ಬಿಟ್ಟು ಉಳಿದ 8 ಲಕ್ಷ ರೂ. ಫಲಾನುಭವಿಗಳು ಪಾವತಿ ಮಾಡಬೇಕಿತ್ತು. ಇದನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಮಾಡಿ, ಒಂದು ಲಕ್ಷ ರೂ. ಕಡಿಮೆ ಮಾಡಿದ್ದಾರೆ. ಅಲ್ಲದೆ ಬ್ಯಾಂಕ್‌ನಲ್ಲಿ ಸಾಲ ಮಾಡಿದರೆ ಶೇ.5 ರಷ್ಟು ಬಡ್ಡಿಯನ್ನು ಫಲಾನುಭವಿಗಳು ಕಟ್ಟಿದರೆ ಉಳಿದ ಬಡ್ಡಿಯನ್ನು ಸರ್ಕಾರ ಕಟ್ಟಲಿದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮಂಟೂರ ರಸ್ತೆಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ 2017ರಲ್ಲಿಯೇ ಭೂಮಿ ಪೂಜೆ ಮಾಡಲಾಗಿತ್ತು. ಇದೀಗ 1,300 ಮನೆ ನಿರ್ಮಾಣ ಮಾಡಿದ್ದು, 1008 ಮನೆಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುವುದು. ಈ ಹಿಂದೆ ಬಿಜೆಪಿ ಸರ್ಕಾರ ಅನುದಾನ ನೀಡಿದ್ದರೆ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಈ ಮನೆಗಳು ಫಲಾನುಭವಿಗಳಿಗೆ ದೊರೆಯುವಂತಾಗಿವೆ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್‌ಹುಸೇನ್ ಹಳ್ಳೂರ, ಅಲ್ತಾಫ್ ಕಿತ್ತೂರ, ಪಾರಸಮಲ್ ಜೈನ್, ರಾಜಶೇಖರ ಮೆಣಸಿನಕಾಯಿ, ಗಣೇಶ ಟಗರಗುಂಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net