ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಅಗ್ನಿಶಾಮಕ ದಳಕ್ಕೆ ವಾಹನಗಳ ಕೊರತೆ

9493708
Published on

ಆರ್.ಕೃಷ್ಣ ಮೈಸೂರು
ಅವಘಡ ಸಂಭವಿಸಿದಾಗ ನೆರವಿಗೆ ಧಾವಿಸುವ ಅಪತ್ಬಾಂಧವ ಜಿಲ್ಲೆಯ ಅಗ್ನಿಶಾಮಕ ದಳಕ್ಕೆ ವಾಹನಗಳ ಕೊರತೆ ಕಾಡುತ್ತಿದೆ.
ಎಲ್ಲಿಯೇ ಬೆಂಕಿ ಅವಘಡ, ಮಳೆಯಿಂದ ಉಂಟಾಗುವ ಅನಾಹುತ, ಹಳೇ ಕಟ್ಟಡಗಳ ದುರಂತ ಸೇರಿದಂತೆ ಇನ್ನು ಯಾವುದೇ ಅನಾಹುತಗಳು ಸಂಭವಿಸಿದಾಗ ಶಬ್ದ ಮೊಳಗಿಸುತ್ತಾ ಸಾಗುವ ಅಗ್ನಿಶಾಮಕ ದಳಕ್ಕೆ ಅಗತ್ಯ ವಾಹನಗಳೇ ಇಲ್ಲ. ನಗರ ಸೇರಿದಂತೆ ಜಿಲ್ಲೆಯಲ್ಲಿ ಇರುವ ಕೇವಲ 10 ವಾಹನಗಳಲ್ಲಿಯೇ ಪರಿಸ್ಥಿತಿ ನಿಭಾಯಿಸಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೂವರು ಪ್ರಭಾವಿ ಸಚಿವರನ್ನು ಹೊಂದಿರುವ ಜಿಲ್ಲೆಯಲ್ಲಿ ಬೆಂಕಿ ಸೇರಿದಂತೆ ಬೇರೆ ಅವಘಡಗಳು ಸಂಭವಿಸಿದಾಗ ತಕ್ಷಣ ಸ್ಪಂದಿಸಲು ವಾಹನ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಇದ್ದ 30 ವಾಹನಗಳಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ವಾಹನ ನೀತಿಯಿಂದ 15 ವರ್ಷ ಪೂರೈಸಿರುವ 20 ವಾಹನಗಳು ಗುಜರಿ ಸೇರಿವೆ.
ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುವುದು ಸಾಮಾನ್ಯ. ಆದರೆ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿ ಕೊರತೆಗಿಂತ ಕಾರ್ಯಾಚರಣೆಗೆ ಅಗತ್ಯವಾದ ವಾಹನಗಳದ್ದೇ ದೊಡ್ಡ ಕೊರತೆ.
ಬೇಸಿಗೆ ಕಾಲದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿದರೆ, ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗುವ ಮಳೆ ನೀರು ಹೊರ ಹಾಕಲು ಅಗ್ನಿಶಾಮಕ ಸಿಬ್ಬಂದಿಯೇ ಬೇಕು. ಸಾಮಾನ್ಯವಾಗಿ ಮಳೆಗಾಲ ಅಥವಾ ಚಳಿಗಾಲದಲ್ಲಿ ಅನಾಹುತ ಸಂಬಂಧ ನಾಲ್ಕರಿಂದ ಐದು ಕರೆಗಳು ಬರುತ್ತಿದ್ದವು. ಬೇಸಿಗೆ ಕಾಲದಲ್ಲಿ ನಿತ್ಯ ಬೆಂಕಿ ಅನಾಹುತದ 25ರಿಂದ 30 ಕರೆಗಳು ಬರುತ್ತಿವೆ. ಇದರಿಂದ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಬೇಕಾಗಿರುವ ಸಿಬ್ಬಂದಿಗೆ ವಾಹನ ಸಮಸ್ಯೆ ಹೆಚ್ಚಾಗಿದ್ದು, ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಂದೇ ಬಾರಿ ಮೂರ್ನಾಲ್ಕು ಅಗ್ನಿ ಅನಾಹುತ ಸಂಬಂಧ ಕರೆ ಬಂದರೆ ಅಗ್ನಿ ಶಮನಕ್ಕೆ ತೆರಳಲು ವಾಹನಗಳೇ ಇರುವುದಿಲ್ಲ. ಒಂದು ಕಾರ್ಯಾಚರಣೆ ಮುಗಿಸಿಕೊಂಡು ಬರುವವರೆಗೂ ಕಾಯಬೇಕು. ಬೇರೆಡೆಯಿಂದ ಕರೆಸುವಷ್ಟರಲ್ಲಿ ಕಾಲಾವಕಾಶ ಹೆಚ್ಚಾಗಿರುವುದರಿಂದ ಅಗ್ನಿ ಅನಾಹುತ ತೀವ್ರತೆ ಹೆಚ್ಚಾಗಿ ಸಮಸ್ಯೆಯಾಗುತ್ತಿದೆ.
ಸೇನಾ ಪಡೆಯಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಬಳಕೆಗೆ ಅವಕಾಶ ಇರುವಂತೆ ತುರ್ತು ಸೇವೆಗೆ ಬಳಕೆಯಾಗುತ್ತಿರುವ ಅಗ್ನಿ ಶಾಮಕ ವಾಹನಗಳ ಬಳಕೆಗೆ ಅನುಮತಿ ನೀಡುವುದು ಅಗತ್ಯವಾಗಿದೆ ಎನ್ನುವ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿದೆ.

ಕೇಂದ್ರದ ನೀತಿಯಿಂದ ವಾಹನಗಳು ಗುಜರಿಗೆ:
ಕೇಂದ್ರ ಸರ್ಕಾರದ ಹೊಸ ಗುಜರಿ ನೀತಿ-2022ರಿಂದ ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. 15 ವರ್ಷಗಳ ಹಳೆಯ ವಾಹನಗಳ ನೋಂದಣಿ ನವೀಕರಿಸದಂತೆ ಕೇಂದ್ರ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಚಾಲನೆಯಲ್ಲಿದ್ದ 30 ವಾಹನಗಳ ಪೈಕಿ 20 ವಾಹನಗಳು ಮೂಲೆ ಸೇರಿವೆ.
ಅಗ್ನಿಶಾಮಕ ಸಿಬ್ಬಂದಿ ಈ ಜಲ ವಾಹನಗಳನ್ನು ಕಾರ್ಯಾಚರಣೆಗೆ ಬಳಸಲು ಸಾಧ್ಯವಾಗುತ್ತಿಲ್ಲ. ಇರುವ 10 ವಾಹನಗಳಲ್ಲಿಯೇ ಇಡೀ ಜಿಲ್ಲೆಯಲ್ಲಿ ಅಗ್ನಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರು ಮಾತ್ರವಲ್ಲ ರಾಜ್ಯದಲ್ಲಿ 15 ವರ್ಷ ಹಳೆಯದಾದ 443 ಜಲ ವಾಹನಗಳಿಗೆ ಸುರಕ್ಷತಾ ಪ್ರಮಾಣ ಪತ್ರ ನೀಡಿ ನೋಂದಣಿ ನವೀಕರಿಸುವ ಕಾರ್ಯವಾಗಿಲ್ಲ. ಇನ್ನಷ್ಟು ವಾಹನಗಳು ನೋಂದಣಿಯಾಗದೆ ಇರುವುದರಿಂದ ಮೂಲೆ ಸೇರುವ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ.
20 ವಾಹನಗಳು ಗುಜರಿ ಸೇರಿರುವುದರಿಂದ ಉಳಿದ 10 ವಾಹನಗಳನ್ನು ಸರಸ್ವತಿಪುರಂ, ಹೆಬ್ಬಾಳು, ಬನ್ನಿಮಂಟಪ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅವಘಡಗಳ ಕಾರ್ಯಾಚರಣೆಗೆ ಬಳಕೆಯಾಗುತ್ತಿವೆ.

ಜಿಲ್ಲೆಯಲ್ಲಿ ಅಗ್ನಿಶಾಮಕ ವಾಹನಗಳ ಕೊರತೆ ಸಂಬಂಧ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ಈಗ 10 ಜಲ ವಾಹನಗಳು ಬಳಕೆಯಾಗುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 10 ಹೊಸ ವಾಹನಗಳನ್ನು ನೀಡುವಂತೆ ಕೋರಲಾಗಿದೆ. ತೊಂದರೆ ಆಗದಂತೆ ಒತ್ತಡದ ನಡುವೆಯೂ ಈಗ ಲಭ್ಯವಿರುವ ವಾಹನಗಳನ್ನೇ ಬಳಸಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕೆ.ಪಿ.ಗುರುರಾಜ್, ಜಿಲ್ಲಾ ಅಗ್ನಿಶಾಮಕಾಧಿಕಾರಿ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net