ಸರ್ಕಾರಿ ಶಾಲೆಗೆ ಶಿಕ್ಷಕರ ಕೊರತೆ, ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದರೂ ಬಹುತೇಕ ಶಾಲಾ ಜಾಗಕ್ಕಿಲ್ಲ ಪಹಣಿ, ಆಟದ ಮೈದಾನ

mng_15 may odilnala shale
ಇತರ ಜಿಲ್ಲೆಗಳ ಸರ್ಕಾರ ಶಾಲೆಗಳನ್ನು ಹೋಲಿಸಿದರೆ ದ.ಕ ಜಿಲ್ಲೆಯ ಬಹುತೇಕ ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದು, ಗುರುವಾಯನಕೆರೆ ಹಾಗೂ ಓಡಿಲ್‌ನಾಳ ಶಾಲೆಗಳ ಚಿತ್ರಣ ಕಾಣಬಹುದು.
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ರಾಜ್ಯದ ಇತರ ಜಿಲ್ಲೆಗಳ ಸರ್ಕಾರ ಶಾಲೆಗಳನ್ನು ಹೋಲಿಸಿದರೆ ದ.ಕ ಜಿಲ್ಲೆಯ ಬಹುತೇಕ ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದರೂ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳು ನಲುಗುತ್ತಿವೆ.

2005ರವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 1981 ಇದ್ದು, ಇದರಲ್ಲಿ ಸರ್ಕಾರಿ ಮಾತ್ರವಲ್ಲ ಅನುದಾನಿತ ಸೇರಿದಂತೆ ಇತರ ಇಲಾಖೆಯ ಶಾಲೆಗಳು ಇವೆ. ಪ್ರಸ್ತುತ ಈ ಶಾಲೆಗಳ ಸಂಖ್ಯೆ 1178ಕ್ಕೆ ತಲುಪಿದೆ. 893 ಸರ್ಕಾರಿ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ಶಿಕ್ಷಕರ ಕೊರತೆಯಿಂದ 1055 ಅತಿಥಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಅದೇ ರೀತಿ 603ಪ್ರೌಢಶಾಲೆಗಳ ಪೈಕಿ 170 ಸರ್ಕಾರಿ ಪ್ರೌಢಶಾಲೆಗಳಿದ್ದು, ಇಲ್ಲಿ 254 ಅತಿಥಿ ಶಿಕ್ಷಕರನ್ನು ಬಳಸಿಕೊಂಡು ತರಗತಿಯಲ್ಲಿ ಪಾಠ ಪ್ರವಚನಗಳು ಸಾಗಿವೆ. ಜಿಲ್ಲೆಯಲ್ಲಿ ಎಲ್ಲೂ ಸರ್ಕಾರಿ ಶಾಲೆಗಳು ಪಾಳುಬಿದ್ದ ಸ್ಥಿತಿಯಲ್ಲಿಲ್ಲ.

*ಶಾಲಾ ಜಾಗಕ್ಕಿಲ್ಲ ಪಹಣಿ-ಆಟದ ಮೈದಾನ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲೂ ಸಮಸ್ಯೆಗಳು ಇಲ್ಲ ಎನ್ನುವಂತಿಲ್ಲ. ಶಿಕ್ಷಕರು ಹಾಗೂ ಕೊಠಡಿಗಳ ಕೊರತೆ, ಛಾವಣಿ ಸಮಸ್ಯೆ, ಆವರಣ ಗೋಡೆ ಇಲ್ಲದೇ ಇರುವುದು, ಆಟದ ಮೈದಾನ ಕೊರತೆ ಇರುವುದು ಸಹಿತ ಹತ್ತಾರು ಸಮಸ್ಯೆಗಳಿವೆ. ಕೆಲವು ಶಾಲೆಗಳು ಉದ್ಯೋಗ ಖಾತರಿ ಮೂಲಕ ಆವರಣಗೋಡೆ ನಿರ್ಮಾಣ ಮಾಡಿಕೊಂಡಿದೆ. ಬಹುತೇಕ ಸರ್ಕಾರಿ ಶಾಲೆಗೆ ಒಂದೆರಡು ಎಕರೆ ಜಾಗವಿದ್ದರೂ ಜಾಗದ ದಾಖಲೆ ಇಲ್ಲ, ಕೆಲವೊಂದು ಶಾಲೆ ಕಟ್ಟಡದ ಅಡಿಸ್ಥಳಕ್ಕೆ ಪಹಣಿಯೂ ಇಲ್ಲ.

--------------

ಮಕ್ಕಳಿದ್ದರೂ ಶಿಕ್ಷಕರಿಲ್ಲ

ಸರ್ಕಾರಿ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ತಲುಪಿದ್ದರಿಂದ ಕೆಲವು ಶಾಲೆಗಳನ್ನು ಮುಚ್ಚಲು ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇತರ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ದ.ಕ ಜಿಲ್ಲೆಯ 24 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿದ್ದರೂ ಸರ್ಕಾರಿ ಶಿಕ್ಷಕರ ಸಂಖ್ಯೆ ಶೂನ್ಯ. ಈ ಪೈಕಿ ಅನೇಕ ಶಾಲೆಗಳಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಮಂಗಳೂರು ಉತ್ತರ ವಲಯದಲ್ಲಿ 6, ಮಂಗಳೂರು ದಕ್ಷಿಣದಲ್ಲಿ 3, ಮೂಡುಬಿದಿರೆ-5, ಬೆಳ್ತಂಗಡಿ-3, ಪುತ್ತೂರು-1, ಬಂಟ್ವಾಳ-4, ಸುಳ್ಯದ 2 ಶಾಲೆಯಲ್ಲಿ ಸರ್ಕಾರಿ ಶಿಕ್ಷಕರೇ ಇಲ್ಲ.

------------------

ಎರಡು ತಿಂಗಳ ಹಿಂದೆ ಶಾಲೆಗಳ ಸಮಸ್ಯೆಗಳ ಕುರಿತು ಮಾಹಿತಿ ನೀಡುವಂತೆ ಬಿಇಒಗಳ ಮೂಲಕ ಸೂಚನೆ ಕಳುಹಿಸಲಾಗಿತ್ತು ಆದರೆ ಚುನಾವಣೆ ಹಿನ್ನೆಲೆಯಲ್ಲಿ ಇದು ಪೂರ್ಣ ರೂಪದಲ್ಲಿ ಸಾಧ್ಯವಾಗಿಲ್ಲ. ಆದರೆ ಈಗ ಮತ್ತೆ ಮಾಹಿತಿಗೆ ಕೇಳಲಾಗಿದೆ ಇನ್ನು ಹದಿನೈದು ದಿನಗಳಲ್ಲಿ ಬಿಇಒಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

ವೆಂಕಟೇಶ ಸುಬ್ರಾಯ ಪಟಾಗಾರ, ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net