ಅಕ್ಕಿ ಕೊರತೆ ಭವಿಷ್ಯದ್ದೇ ಚಿಂತೆ: ಕೃಷಿಯಿಂದ ರೈತರು ವಿಮುಖ, ಭತ್ತ ಬೆಳೆಯುವ ಪ್ರದೇಶ ಕುಂಠಿತ

Paddy
Published on

ಬೆಂಗಳೂರು: ಇನ್ನು ಹತ್ತು ವರ್ಷಗಳಲ್ಲಿ ದೇಶಾದ್ಯಂತ ಅನ್ನಕ್ಕೂ ಕುತ್ತು ಬರಬಹುದು ಎಂದು ವಿಜ್ಞಾನಿಗಳು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಜನರಿಗೆ ನಿರಾಸಕ್ತಿ ಜತೆಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಇದರಿಂದ ಭತ್ತ ಬೆಳೆಯುವ ಪ್ರದೇಶ ಗಣನೀಯವಾಗಿ ಇಳಿಕೆ ಕಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2030ರಲ್ಲಿ ಇಡೀ ದೇಶ ಅಕ್ಕಿ ಕೊರತೆ ಎದುರಿಸುವ ಅಪಾಯವಿದೆ ಎಂಬ ಆತಂಕಕಾರಿ ಅಂಶವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಭತ್ತ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಣ್ಣಿನ ಗುಣಮಟ್ಟವೂ ಕುಸಿಯುತ್ತಿದೆ. ಇದರ ನಡುವೆ ಭತ್ತದ ಇಳುವರಿಯನ್ನು ಗಣನೀಯವಾಗಿ ಏರಿಕೆ ಮಾಡುವ ಅನಿವಾರ್ಯತೆ ಇದೆ ಎಂದು ಇತ್ತೀಚೆಗೆ ನಡೆದ ಅಕ್ಕಿ ಸಂಶೋಧನಾ ಗುಂಪಿನ ವಾರ್ಷಿಕ ಸಭೆಯಲ್ಲಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ವರ್ಷ 1.5 ದಶಲಕ್ಷ ಟನ್ ಉತ್ಪಾದನೆಯನ್ನು ಹೆಚ್ಚಿಸದಿದ್ದರೆ ಅಕ್ಕಿ ಕೊರತೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳಿಂದ ನಿರೀಕ್ಷಿತ ಬೆಂಬಲ ದೊರಕದ ಪರಿಣಾಮ ಪರಿಸ್ಥಿತಿ ಗಂಭೀರವಾಗುವ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಉತ್ಪಾದನೆ ಹೆಚ್ಚಿಸಲು ಪ್ರಯತ್ನ: ಬಾಸ್ಮತಿ ಸೇರಿ ಅನೇಕ ಭತ್ತದ ತಳಿಗಳು ಗರಿಷ್ಠ ಉದ್ದವನ್ನು ತಲುಪಿವೆ. ಉಳಿದ ಸಣ್ಣ ಉದ್ದ ಹಾಗೂ ಕಡಿಮೆ ತೂಕದ ತಳಿಗಳಲ್ಲಿ ಉದ್ದವನ್ನು ಹೆಚ್ಚಳ ಮಾಡಿ ಆ ಮೂಲಕ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆ, ದೆಹಲಿಯಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಪ್ಲಾಂಟ್ ಜಿನೋಮ್ ರಿಸರ್ಚ್(ಎನ್​ಐಪಿಜಿಆರ್) ವಿಜ್ಞಾನಿ ಡಾ. ಜಿತೇಂದ್ರ ಕೆ. ಠಾಕೂರ್ ತಿಳಿಸಿದ್ದಾರೆ.

2030ಕ್ಕೆ 130 ದಶಲಕ್ಷ ಟನ್ ಅಗತ್ಯ

ಸದ್ಯ 130 ಕೋಟಿ ಇರುವ ಭಾರತದ ಜನಸಂಖ್ಯೆ 2030ಕ್ಕೆ ಸುಮಾರು 150 ಕೋಟಿಗೆ ಹೆಚ್ಚುವ ಅಂದಾಜಿದೆ. 2030ರ ವೇಳೆಗೆ ದೇಶದಲ್ಲಿ 130 ದಶಲಕ್ಷ ಟನ್ ಭತ್ತ ಉತ್ಪಾದನೆಯಾದರೆ ಮಾತ್ರ ದೇಶ ಆಹಾರ ಸ್ವಾವಲಂಬನೆ ಹೊಂದಲು ಸಾಧ್ಯ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್(ಐಸಿಎಆರ್) ತಿಳಿಸಿದೆ. 2017-18ರಲ್ಲಿ ದೇಶದಲ್ಲಿ 112 ದಶಲಕ್ಷ ಟನ್ ಭತ್ತ ಉತ್ಪಾದನೆಯಾಗಿತ್ತು. ಈ ಪ್ರಮಾಣ 3.2 ದಶಲಕ್ಷ ಟನ್ ಹೆಚ್ಚಿ, 2018-19ರಲ್ಲಿ 116 ದಶಲಕ್ಷ ಟನ್​ಗೆ ಏರಿತ್ತು. ಆದರೆ 2019-20ರಲ್ಲಿ ಯಾವುದೇ ಏರಿಕೆ ಕಂಡಿಲ್ಲ. 2030ಕ್ಕೆ 130 ದಶಲಕ್ಷ ಟನ್ ಗುರಿ ಸಾಧಿಸಲು ಪ್ರತಿವರ್ಷ ಸರಾಸರಿ 1.5 ದಶಲಕ್ಷ ಟನ್ ಭತ್ತದ ಉತ್ಪಾದನೆ ಹೆಚ್ಚುತ್ತಲೇ ಹೋಗಬೇಕು ಎಂದು ಐಸಿಎಆರ್ ಸಲಹೆ ನೀಡಿದೆ.

ಬೆಲೆ ಏರಿಕೆ ಸಾಧ್ಯತೆ

ಭತ್ತ ಸೇರಿ ಕೃಷಿ ಸಂಶೋಧನೆಗೆ ಕೇಂದ್ರ ಸರ್ಕಾರ ಶೇ.75 ಹಾಗೂ ರಾಜ್ಯ ಸರ್ಕಾರಗಳು ಶೇ. 25 ಧನಸಹಾಯ ನೀಡುತ್ತವೆ. ಅಕ್ಕಿಯ ಇಳುವರಿ ಕಡಿಮೆಯಾದರೆ ಆಹಾರದ ಕೊರತೆ ಜತೆಗೆ ಬೆಲೆ ಹೆಚ್ಚಳವಾಗುವ ಅಪಾಯವಿರುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆಗೆ ಇನ್ನಷ್ಟು ಧನಸಹಾಯದ ಅವಶ್ಯಕತೆ ಇದೆ. ನಿವೃತ್ತರಾಗುವ ಕೃಷಿ ವಿಜ್ಞಾನಿಗಳ ಸ್ಥಾನವನ್ನು ಮೂರ್ನಾಲ್ಕು ವರ್ಷದಿಂದ ಭರ್ತಿ ಮಾಡದಿರುವುದು ಸಂಶೋಧನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪರ್ಯಾಯ ತಳಿ ಸಂಶೋಧನೆ

ಮಂಡ್ಯದ ವಿ.ಸಿ. ಫಾರಂನಲ್ಲಿ ಭತ್ತದ ಹೊಸ ತಳಿ ಅಭಿವೃದ್ಧಿ ನಡೆಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆಯುವ ಜ್ಯೋತಿ ಭತ್ತ ಇಳುವರಿಯಲ್ಲಿ ಇಳಿಕೆ ಕಂಡಿದ್ದು, ಅದರ ಪರ್ಯಾಯವಾಗಿ ಕೆಎಂಪಿ220 ಎಂಬ ಭತ್ತವನ್ನು ರೈತರಿಗೆ ನೀಡಿ ಕ್ಷೇತ್ರ ಪ್ರಯೋಗ ನಡೆಸಲಾಗುತ್ತಿದೆ ಎಂದು ಡಾ.ಎಂ.ಪಿ. ರಾಜಣ್ಣ ಹೇಳಿದ್ದಾರೆ. ಭತ್ತದಲ್ಲಿ ಇಳುವರಿಯನ್ನು ಹೆಚ್ಚಿಸಬಲ್ಲಂತಹ ಲೋ ಡೆನ್ಸಿಟಿ ರೀಜನ್(ಎಲ್​ಡಿಆರ್) ಎಂಬ ಜಿನೋಮ್ ಅನ್ನು ಜಿತೇಂದ್ರ ಠಾಕೂರ್ ಅವರ ತಂಡ ಇತ್ತೀಚೆಗೆ ಸಂಶೋಧಿಸಿದೆ. ಇಳುವರಿ ಹೆಚ್ಚಿಸುವ ಪ್ರಯತ್ನಗಳು ಆದಷ್ಟು ಬೇಗನೆ ಕ್ಷೇತ್ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವ್ಯಾಪಕ ಪ್ರಮಾಣದಲ್ಲಿ ರೈತರಿಗೆ ದೊರೆತರೆ ಮಾತ್ರ ಭಾರತದ ಆಹಾರ ಭದ್ರತೆ ಖಾತ್ರಿಯಾಗಲಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಇಳುವರಿ ಇಳಿಕೆ

ವಿಶ್ವದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶ ಭಾರತದಲ್ಲಿದೆ. ಆದರೆ 1996-97ರಿಂದ 2018-19ರವರೆಗೂ ಭತ್ತ ಬೆಳೆಯುವ ಪ್ರದೇಶ 43 ದಶಲಕ್ಷ ಹೆಕ್ಟೇರ್ ಆಸುಪಾಸಿನಲ್ಲೇ ಇದೆ. ಹಾಗಾಗಿ ಭತ್ತದ ಉತ್ಪಾದನೆ ಹೆಚ್ಚಿಸಲು, ವಿಸ್ತರಣಾ ಕಾರ್ಯ ಕೈಗೊಳ್ಳುವ ಸಾಧ್ಯತೆ ಕಡಿಮೆ. ಇತರ ದೇಶಗಳ ಹೋಲಿಕೆಯಲ್ಲಿ ಭಾರತದಲ್ಲಿ ಭತ್ತದ ಇಳುವರಿಯೂ ತೀರಾ ಕಡಿಮೆ. 2015ರ ಅಂಕಿ ಅಂಶದಂತೆ ಚೀನಾದಲ್ಲಿ ಪ್ರತಿ ಹೆಕ್ಟೇರ್​ಗೆ 6,710 ಕೆ.ಜಿ. ಭತ್ತ ಬೆಳೆಯಲಾಗುತ್ತಿತ್ತು. ಇಂಡೋನೇಷ್ಯಾದಲ್ಲಿ 5,152 ಕೆ.ಜಿ., ಬಾಂಗ್ಲಾದೇಶದಲ್ಲಿ 4,376 ಕೆ.ಜಿ., ವಿಯೆಟ್ನಾಮ್ಲ್ಲಿ 5,573 ಕೆ.ಜಿ. ಇಳುವರಿ ಇತ್ತು. ಭಾರತದಲ್ಲಿ ಇದರ ಪ್ರಮಾಣ ಕೇವಲ 2,390 ಕೆ.ಜಿ. ಇತ್ತು. ಜಾಗತಿಕ ಸರಾಸರಿ 4,417 ಕೆ.ಜಿ ಪ್ರತಿ ಹೆಕ್ಟೇರ್ ಪ್ರಮಾಣದಿಂದಲೂ ಸಾಕಷ್ಟು ಹಿಂದಿತ್ತು. ಈಗ ಸುಮಾರು 2,400 ಕೆ.ಜಿ. ಪ್ರತಿ ಹೆಕ್ಟೇರ್​ಗೆ ಏರಿಕೆಯಾಗಿದೆಯಾದರೂ ಜಾಗತಿಕ ಪ್ರಮಾಣಕ್ಕಿಂತ ಸಾಕಷ್ಟು ಹಿಂದೆಯೇ ಉಳಿದಿದೆ.

ತಳಿ ಅಭಿವೃದ್ಧಿ ಸವಾಲು

ಕಳೆದ ನಾಲ್ಕೈದು ವರ್ಷಗಳಿಂದ ಭಾರತದ ಪ್ರಮುಖ ಭತ್ತದ ತಳಿಗಳ ಇಳುವರಿ ಸ್ಥಿರವಾಗಿದ್ದು, ಏರಿಕೆಯತ್ತ ಸಾಗುತ್ತಿಲ್ಲ. ಭತ್ತ ಬೆಳೆಯುವ ಪ್ರದೇಶ ಏರಿಕೆಯಾಗುವ ಬದಲಿಗೆ ಕಡಿಮೆಯಾಗುತ್ತಿದೆ. ರೈತರು ಕೃಷಿಯನ್ನು ತೊರೆಯುತ್ತಿದ್ದಾರೆ. ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ಇದೆಲ್ಲದರ ಜತೆಗೆ ಹವಾಮಾನ ವೈಪರೀತ್ಯ ತೀವ್ರ ಸಂಕಷ್ಟ ತಂದೊಡ್ಡುತ್ತಿದೆ. ಇಷ್ಟೆಲ್ಲ ಸವಾಲುಗಳ ನಡುವೆಯೇ ಹೊಸ ತಳಿ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆ (ಎಐಸಿಆರ್​ಐಪಿ) ಕಾರ್ಯನಿರ್ವಹಿಸುತ್ತಿದೆ ಎಂದು ಮಂಡ್ಯದ ವಿ.ಸಿ. ಫಾಮರ್್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಭತ್ತದ ತಳಿ ವಿಜ್ಞಾನಿ ಡಾ. ಎಂ. ಪಿ. ರಾಜಣ್ಣ ತಿಳಿಸಿದ್ದಾರೆ.

ಭತ್ತ ಉತ್ಪಾದನೆ ಕಡಿಮೆ ಆಗಲು ಕಾರಣವೇನು?

ಸರ್ಕಾರ ಪ್ರೋತ್ಸಾಹ ನೀಡುತ್ತಿದೆಯೇ?

ಭತ್ತ ಬೆಳೆಯುವುದರಿಂದ ರೈತರು ಏಕೆ ವಿಮುಖರಾಗುತ್ತಿದ್ದಾರೆ?

ಭಾಗ-2 ನಾಳೆ ನೋಡಿ...

| ರಮೇಶ​ ದೊಡ್ಡಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net