ವಿವಿಗೆ ಕಾಯಂ ಕನ್ನಡ ಪ್ರಾಧ್ಯಾಪಕರ ಕೊರತೆ

Published on

ಬಳ್ಳಾರಿ : ಜಿಲ್ಲೆಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಆರಂಭವಾಗಿ ಹದಿನಾಲ್ಕು ವರ್ಷ ಕಳೆದರೂ ಸ್ನಾತಕೋತ್ತರ ಕನ್ನಡ ವಿಭಾಗಕ್ಕೆ ಕಾಯಂ ಪ್ರಾಧ್ಯಾಪಕರ ಇಲ್ಲದೆ ಸೊರಗುತ್ತಿದೆ.

ಇಲ್ಲಿನ ವಿವಿಯು 2010ರಲ್ಲಿ ಸ್ಥಾಪನೆಯಾಗಿ ಮೊದಲು ವಾಣಿಜ್ಯಶಾಸ್ತ್ರದಿಂದ ಪ್ರಾರಂಭವಾಗಿ ಸದ್ಯ 29 ವಿಭಾಗಗಳನ್ನು ಹೊಂದಿದೆ. ಕೆಲ ವರ್ಷಗಳ ಹಿಂದಯೇ ಆರಂಭವಾದ ಹಲವು ವಿವಿಧ ವಿಭಾಗಗಳಿಗೆ ಕೆಲ ವರ್ಷಗಳಲ್ಲಿಯೇ ಕಾಯಂ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಂಡಿರುವ ವಿವಿಯು ಕನ್ನಡ ವಿಭಾಗಕ್ಕೆ ಕಾಯಂ ಪ್ರಾಧ್ಯಾಪಕರ ನೇಮಿಸಿಕೊಳ್ಳಲು ಮೀನಾಮೇಷ ತೋರುತ್ತಿದೆ. ಇನ್ನೂ ವಿವಿಯಲ್ಲಿಯೇ ಕಳೆದ ಹದಿನಾಲ್ಕು ವರ್ಷಗಳಿಂದ ಬೇರೆ ವಿಭಾಗದ ಕಾಯಂ ಉಪನ್ಯಾಸಕರಿಗೆ ವಿಭಾಗದ ಹೊಣೆ ವಹಿಸಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಭೋದನೆ ಮಾಡಲಾಗುತ್ತಿದೆ. ಈ ಕನ್ನಡ ವಿಭಾಗಕ್ಕೆ ಪ್ರತಿ ವರ್ಷ 40 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ದಾಖಲಾತಿಗೆ ಅವಕಾಶವಿದೆ. ಆದರೆ, ಈವರೆಗೂ ಒಂದು ವರ್ಷವೂ ಕೂಡ ಪೂರ್ಣ ಪ್ರಮಾಣದಲ್ಲಿ ದಾಖಲಾತಿ ಪೂರ್ಣಗೊಂಡಿಲ್ಲ. ಈ ವರ್ಷ ಕೂಡ 22 ವಿದ್ಯಾರ್ಥಿಗಳು ದಾಖಲಾತಿ ಪಡೆದಿದೆ ಎಂಬ ಮಾಹಿತಿಯಿದೆ. ವರ್ಷದಿಂದ ವರ್ಷಕ್ಕೆ ಕನ್ನಡ ವಿಭಾಗಕ್ಕೆ ಗಣನೀಯವಾಗಿ ದಾಖಲಾತಿಯಲ್ಲಿ ಕುಸಿತ ಕಂಡರೂ ಕಾಯಂ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಸಕ್ತಿ ತೋರುತ್ತಿಲ್ಲ. ಸದ್ಯ ವಿವಿಯಲ್ಲಿ ಮೂರು ಕನ್ನಡ ಪ್ರಾಧ್ಯಾಪಕರ ಹುದ್ದೆಗಳಿವೆ, ಈಗಾಗಲೇ ಕೆಲ ತಿಂಗಳ ಹಿಂದೆ ಸಂದರ್ಶನ ಕೂಡ ನಡೆಸಲಾಗಿತ್ತು. ಕಳೆದ ಲೋಕಸಭಾ ಉಪಚುನಾವಣೆ ಹಿನ್ನಲೆ ಮುಂದೂಡಲಾಯಿತು ಎಂಬುದಾಗಿ ವಿವಿ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ನಾಟಕ ವಿಭಾಗಕ್ಕೂ ಕೊರತೆ : 2018ರಲ್ಲಿ ಉತ್ತರ ಕರ್ನಾಟಕದಲ್ಲಿಯೇ ಸ್ನಾತಕೋತ್ತರ ನಾಟಕ ವಿಭಾಗವನ್ನು ಅಳವಡಿಸಿಕೊಂಡ ಮೊದಲ ವಿಎಸ್‌ಕೆ ವಿವಿಯು ಎಂಬ ಹೆಗ್ಗಳಿಕೆ ಪಡೆಯಿತು. ಆದರೆ, ಈವರೆಗೂ ಕಾಯಂ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಂಡಿಲ್ಲ. ಅಲ್ಲದೆ, ವಿಭಾಗಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸದೆ ಇರುವುದರಿಂದ ದಾಖಲಾತಿ ಪ್ರಮಾಣ ಕೂಡ ಹೆಚ್ಚುತ್ತಿಲ್ಲ. ವಿವಿಯ ಹಲವು ವಿಭಾಗಗಳಿಗೆ ಒಬ್ಬರೇ ಕಾಯಂ ಪ್ರಾಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ. ವಿಭಾಗದ ವಿಷಯ ಅನುಗುಣವಾಗಿ ಪ್ರಾಯೋಗಿಕ ಸೌಲಭ್ಯಗಳಿಲ್ಲದೆ ಕೇವಲ ಥೇರಿ ತರಗತಿಗಳು ಮಾತ್ರ ಕಲಿಸಲಾಗುತ್ತಿದೆ. ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆಯುವ ಸಮಾಧಾನ ಬಿಟ್ಟರೆ ಪೂರ್ಣ ವಿಷಯ ಕಲಿತಿರುವೆ ಎಂಬ ಸಂತೃಪ್ತಿ ಇಲ್ಲ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದರು. 2015ರಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಪದವಿಯಲ್ಲಿ ನಾಟಕ ವಿಭಾಗವನ್ನು ವಿವಿ ಅಧೀನದಲ್ಲಿ ಸರಳಾದೇವಿ ಕಾಲೇಜಿನಲ್ಲಿ ತೆರೆಯಲಾಯಿತು. ಆರಂಭವಾಗಿ ಹತ್ತು ವರ್ಷ ಸಮೀಪಿಸುತ್ತಿದ್ದರೂ ಕಾಯಂ ಪ್ರಾಧ್ಯಾಪಕರ ಇಲ್ಲದೆ ತರಗತಿಗಳು ನಡೆಸಲಾಗುತ್ತಿದೆ.

ಕೋಟ್... ಜಿಲ್ಲೆಯ ಆಂಧ್ರದಲ್ಲಿರುವ ಹಲವು ಕನ್ನಡ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ ಎಂಬುದಾಗಿ ಶಾಲೆಗಳನ್ನುಆಂಧ್ರ ಸರ್ಕಾರ ಮುಚ್ಚಲಾಗುತ್ತಿದೆ. ಅದರಂತೆ ಕೆಲ ವರ್ಷಗಳ ಬಳಿಕ ಇಲ್ಲಿನ ವಿವಿಯಲ್ಲಿಯೂ ಕೂಡ ವಿದ್ಯಾರ್ಥಿಗಳ ದಾಖಲಾತಿ ಕುಸಿತಯುತ್ತಿದೆ ಎಂದು ಕನ್ನಡ ವಿಭಾಗ ಮುಚ್ಚಿದರೂ ಆಶ್ಚರ್ಯಪಡಬೇಕಿಲ್ಲ.

- ಹೆಸರು ಹೇಳದ, ಪ್ರಾಧ್ಯಾಪಕ, ವಿವಿ, ಬಳ್ಳಾರಿ.

ಕೋಟ್.... ಇಲ್ಲಿನ ವಿಎಸ್‌ಕೆ ವಿವಿಯ ಕನ್ನಡ ಹಾಗೂ ನಾಟಕ ವಿಭಾಗಕ್ಕೆ ಕಾಯಂ ಪ್ರಾಧ್ಯಾಪಕರ ನೇಮಕ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು.

- ಎಸ್.ಎನ್. ರುದ್ರೇಶ್, ಕುಲಸಚಿವ, ವಿಎಸ್‌ಕೆ, ವಿವಿ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net