ಜಿಲ್ಲೆಯಲ್ಲಿ ಲೈನ್‌ಮೆನ್‌ಗಳ ಕೊರತೆ

Shortage of linemen in the district
Published on

ಮಡಿಕೇರಿ:

ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗಿನಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಆಗದಂತೆ ನೋಡಿಕೊಳ್ಳುವಲ್ಲಿ ಪವರ್‌ಮ್ಯಾನ್‌ಗಳ ಪಾತ್ರ ಮಹತ್ವದ್ದು. ಮಳೆಗಾಲದಲ್ಲಂತೂ ಇವರ ಕೆಲಸ ಸವಾಲಿನಿಂದ ಕೂಡಿರುತ್ತದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಪಡಿಸಲು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೆಲವೊಮ್ಮೆ ವಾರಗಟ್ಟಲೆ ಶ್ರಮಿಸಬೇಕಾದ ಅನಿವಾರ್ಯತೆಯೂ ಇರುತ್ತದೆ. ಆದರೆ ಜಿಲ್ಲೆಯಲ್ಲಿ ಪವರ್‌ಮ್ಯಾನ್‌ಗಳ ಕೊರತೆ ಕಾಡುತ್ತಿದೆ. ಒಟ್ಟು ೫೭೩ ಲೈನ್‌ಮೆನ್‌ಗಳು ಇರಬೇಕಿದಲ್ಲಿ ಕೇವಲ ೧೯೪ ಲೈನ್‌ಮೆನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಡಗಿನಲ್ಲಿ ಚಿಕ್ಕದಾಗಿ ಗಾಳಿ ಬೀಸಿದರೆ ಸಾಕು ಎಲ್ಲೋ ಒಂದು ಮರದ ರೆಂಬೆ ಮುರಿದು ಬಿದ್ದು ವಿದ್ಯುತ್ ಕಡಿತ ಆಗಿಬಿಡುತ್ತದೆ. ಸಾಮಾನ್ಯ ದಿನಗಳಲ್ಲೇ ಇಂಥ ಸ್ಥಿತಿ ಆದರೆ ಮಳೆಗಾಲದಲ್ಲಿನ ಪರಿಸ್ಥಿತಿ ಊಹಿಸಿಕೊಳ್ಳಬಹುದು. ಜೋರಾಗಿ ಅಪ್ಪಳಿಸುವ ಗಾಳಿ, ಆಕಾಶವೇ ತೂತು ಆದಂತೆ ಸುರಿಯುವ ಮಳೆ, ಅಲ್ಲಲ್ಲಿ ಗುಡ್ಡ ಕುಸಿತ… ಹೀಗೆ ಒಂದಿಲ್ಲೊಂದು ಕಾರಣಕ್ಕೆ ವಿದ್ಯುತ್ ಹೊರಟು ಹೋಗುವುದು ಇಲ್ಲಿ ವಿಶೇಷವೇನೂ ಅಲ್ಲ. ಇಂಥ ಸಂದರ್ಭದಲ್ಲಿ ಲೈನ್‌ಮ್ಯಾನ್‌ಗಳು ಮೈಚಳಿ ಬಿಟ್ಟು ಕಾರ್ಯನಿರ್ವಹಣೆ ಮಾಡದಿದ್ದರೆ ಸಂಪೂರ್ಣ ಜಿಲ್ಲೆಯೇ ಕತ್ತಲಲ್ಲಿ ದಿನದೂಡಬೇಕಾಗುತ್ತದೆ. ವಾಹನ ಸಂಪರ್ಕ ಅಸಾಧ್ಯವಾದ ಕಡೆಗಳಿಗೂ ತೆರಳಿ ವಿದ್ಯುತ್ ಸಂಪರ್ಕ ಮರು ಕಲ್ಪಿಸುವಲ್ಲಿ ಇವರ ಪಾತ್ರ ಮರೆಯುವಂತೆಯೇ ಇಲ್ಲ.

ಗುಡ್ಡಗಾಡು ಪ್ರದೇಶವಾದ ಕಾರಣ ಕೊಡಗಿನಲ್ಲಿ ಲೈನ್‌ಮ್ಯಾನ್‌ಗಳಿಗೆ ಸವಾಲು ಜಾಸ್ತಿ. ಬಹುತೇಕ ವಿದ್ಯುತ್ ಲೈನ್‌ಗಳು ಅರಣ್ಯ ಪ್ರದೇಶ, ಕಾಫಿ ತೋಟಗಳ ಮಧ್ಯೆ ಹಾದು ಹೋಗಿದ್ದು, ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಕಂಬಗಳು ಮುರಿದು ಬೀಳುವುದು, ವಿದ್ಯುತ್ ಪೂರೈಕೆ ಸ್ಥಗಿತ ಆಗುವುದು ಮಳೆಗಾಲದಲ್ಲಿ ಇಲ್ಲಿ ಆಗಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಭಾರಿ ಮಳೆ, ಗಾಳಿ ಲೆಕ್ಕಿಸದೇ ಲೈನ್‌ಮ್ಯಾನ್‌ಗಳು ತೋಟದ ಒಳಭಾಗಕ್ಕೆ ತೆರಳಿ ದುರಸ್ತಿ ಕೆಲಸ ಮಾಡುತ್ತಾರೆ. ತೋಟದಲ್ಲಿ ವಾಹನಗಳು ತೆರಳದ ಜಾಗಕ್ಕೆ ತೂಕದ ವಿದ್ಯುತ್ ಕಂಬಗಳನ್ನು ಹೊತ್ತುಕೊಂಡೇ ಹೋಗಬೇಕಾಗುತ್ತದೆ.
ಮಳೆಗಾಲದಲ್ಲಿ ಲೈನ್‌ಮ್ಯಾನ್‌ಗಳ ಕೆಲಸ ಒಂದು ರೀತಿಯ ಸಾಹಸದಿಂದ ಕೂಡಿದ್ದರೆ, ಮಳೆಗಾಲ ಶುರುವಾಗುವುದಕ್ಕೂ ಮುಂಚೆ ಮತ್ತೊಂದು ರೀತಿಯಲ್ಲಿ ಶ್ರಮದ ಕೆಲಸ ಇರುತ್ತದೆ. ವಿದ್ಯುತ್ ಲೈನ್ ಹಾದು ಹೋಗಿರುವ ಅರಣ್ಯ ಅಥವಾ ಕಾಫಿ ತೋಟದೊಳಗೆ ತೆರಳಿ ವಿದ್ಯುತ್ ಮಾರ್ಗದ ಅಕ್ಕಪಕ್ಕದಲ್ಲಿರುವ ಮರದ ರೆಂಬೆ, ಕೊಂಬೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಡಿಯಬೇಕಾಗುತ್ತದೆ. ಅಪಾಯಕಾರಿ ಸ್ಥಿತಿಯಲ್ಲಿ ಇರುವ ಮರಗಳನ್ನು ತೆರವು ಮಾಡುವ ಜವಾಬ್ದಾರಿಯೂ ಇವರ ಮೇಲೆ ಇರುತ್ತದೆ. ಮುರಿದ ವಿದ್ಯುತ್ ಕಂಬ, ಹಳೆಯ ತಂತಿಗಳನ್ನೂ ಬದಲಿಸುವ ಕೆಲಸ ಇರುತ್ತದೆ. ಹೀಗೆ ವರ್ಷ ಪೂರ್ತಿ ಕೊಡಗಿನ ಲೈನ್‌ಮ್ಯಾನ್‌ಗಳು ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.

ವಿದ್ಯುತ್ ಕೈಕೊಟ್ಟಾಗ ಮಾತ್ರ ನೆನಪಾಗುವ ಲೈನ್‌ಮ್ಯಾನ್‌ಗಳ ಸಂಖ್ಯೆ ಕೊಡಗಿನಲ್ಲಿ ಅತ್ಯಂತ ಕಡಿಮೆ ಇದೆ. ಮಂಜೂರಾದ ಹುದ್ದೆಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಲೈನ್‌ಮ್ಯಾನ್‌ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರ ಮೇಲೆ ಕೆಲಸ ಒತ್ತಡ ಹೆಚ್ಚು ಇದೆ. ಹಿಂದೊಮ್ಮೆ ರಾಜ್ಯಾದ್ಯಂತ ನಡೆದಿದ್ದ ನೇಮಕಾತಿ ಪ್ರಕ್ರಿಯೆ ಸಂದರ್ಭ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಇಲ್ಲಿಯ ಅಗತ್ಯತೆಗೆ ತಕ್ಕಷ್ಟು ಸಂಖ್ಯೆಯಲ್ಲಿ ಹುದ್ದೆಗಳು ಭರ್ತಿ ಆಗಿದ್ದವು. ಆದರೆ ವರ್ಗಾವಣೆ ಸಂದರ್ಭ ಬಹುತೇಕ ಲೈನ್‌ಮ್ಯಾನ್‌ಗಳು ಸ್ವಂತ ಜಿಲ್ಲೆಗೆ ವರ್ಗಾ ಮಾಡಿಸಿಕೊಂಡು ತೆರಳಿದ್ದು, ಲೈನ್‌ಮ್ಯಾನ್ ಕೊರತೆ ಉಂಟಾಗಲು ಕಾರಣವಾಗಿದೆ.

ಕೊಡಗಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಮಂಜೂರಾಗಿರುವ ೪ ಪವರ್ ಮ್ಯಾನ್‌ಗಳ ಹುದ್ದೆಯಲ್ಲಿ ೪ ಕೂಡ ಖಾಲಿ ಇದೆ. ಮಂಜೂರಾಗಿರುವ ೨ ಸಹಾಯಕ ಮಾರ್ಗದಾಳು ಹುದ್ದೆಯಲ್ಲಿ ೨ ಕೂಡ ಖಾಲಿ ಉಳಿದಿದೆ. ಸ್ಟೇಷನ್ ಪರಿಚಾರಕ ದರ್ಜೆ ೧ಕ್ಕೆ ೨ ಹುದ್ದೆಗಳು, ಸ್ಟೇಷನ್ ಪರಿಚಾರಕ ದರ್ಜೆ ೨ರ ೧ ಹುದ್ದೆ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ೨ ಹುದ್ದೆಗಳು ಮಂಜೂರಾಗಿದ್ದರೂ ಈ ಎಲ್ಲಾ ಮಂಜೂರಾದ ಹುದ್ದೆಗಳು ಖಾಲಿ ಇವೆ.
ಸೆಸ್ಕ್ ವ್ಯಾಪ್ತಿಯಲ್ಲಿ ೧೪೦ ಪವರ್ ಮ್ಯಾನ್ ಹುದ್ದೆ ಮಂಜೂರಾಗಿದ್ದು, ಕೇವಲ ಮೂವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ೧೩೭ ಹುದ್ದೆ ಖಾಲಿ ಇದೆ. ಮಂಜೂರಾದ ೧೪೨ ಸಹಾಯಕ ಪವರ್ ಮ್ಯಾನ್ ಹುದ್ದೆಗಳ ಪೈಕಿ ೬೦ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ೨೯೧ ಕಿರಿಯ ಪವರ್ ಮ್ಯಾನ್ ಹುದ್ದೆಗಳು ಮಂಜೂರಾಗಿದ್ದು ೧೬೦ ಹುದ್ದೆಗಳು ಖಾಲಿ ಉಳಿದಿವೆ. ಹೀಗೆ ಕೊಡಗಿಗೆ ಮಂಜೂರಾಗಿರುವ ಒಟ್ಟು ೫೭೩ ಹುದ್ದೆಗಳಲ್ಲಿ ೧೯೪ರಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಬರೋಬ್ಬರಿ ೩೭೯ ಹುದ್ದೆಗಳು ಖಾಲಿ ಇವೆ.

ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲಿ ಮಡಿಕೇರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಿರಿಯ ಪವರ್ ಮ್ಯಾನ್, ಸಹಾಯ ಪವರ್ ಮ್ಯಾನ್ ತಮ್ಮ ಜಿಲ್ಲೆಗೆ ವರ್ಗಾ ಆಗಿದ್ದಾರೆ. ಲಭ್ಯ ಇರುವ ಸಂಪನ್ಮೂಲದಲ್ಲಿ ಪ್ರಸ್ತುತ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಸೆಸ್ಕ್‌ನಲ್ಲಿ ಆಯಾಯ ಜಿಲ್ಲೆಯ ಸ್ಥಳೀಯರಿಗೆ ತರಬೇತಿ ನೀಡಲು ಸೂಚಿಸಲಾಗಿದೆ. ಇದರಿಂದ ಲೈನ್‌ಮೆನ್ ಹುದ್ದೆಯ ಆಯ್ಕೆ ಸಂದರ್ಭ ಸ್ಥಳೀಯರಿಗೆ ಪ್ರಯೋಜನ ಆಗಲಿದೆ.
ಕೆ.ಜೆ. ಜಾರ್ಜ್, ಇಂಧನ ಸಚಿವ

ಅಗತ್ಯ ಸಂಖ್ಯೆಯಲ್ಲಿ ಲೈನ್‌ಮೆನ್‌ಗಳು ಇಲ್ಲದರಿರುವುದರಿಂದ ಭಾಗಮಂಡಲದಂತಹ ಪ್ರದೇಶಕ್ಕೆ ಸಮಸ್ಯೆ ಆಗುತ್ತದೆ. ಮಳೆಗಾಲದಲ್ಲಿ ಇಲ್ಲಿ ಒಮ್ಮೊಮ್ಮೆ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ಕೊಡಗಿಗೆ ಮಂಜೂರಾಗಿರುವ ಸಂಖ್ಯೆಯಲ್ಲಿ ಲೈನ್‌ಮೆನ್‌ಗಳ ನೇಮಕ ಆಗಬೇಕು. ಸ್ಥಳೀಯರಿಗೆ ಆದ್ಯತೆ ಕೊಟ್ಟರೆ ಉತ್ತಮ.
ಜೆ.ಬಿ. ರವಿಶಂಕರ, ಭಾಗಮಂಡಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net