ಪಿಯುಸಿ ಕಾಲೇಜಿನ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳಲ್ಲಿ ಕಳವಳ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು
ಉಪನ್ಯಾಸಕರ ಕೊರತೆ ಕಾರಣಕ್ಕೆ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳ ಬೋಧನೆ ಮೇಲೆ ಪರಿಣಾಮ ಬೀರಲಿದೆ. ಇದು ವಿದ್ಯಾರ್ಥಿಗಳಲ್ಲೂ ಕಳವಳ ಮೂಡಿಸಿದೆ.

ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಸಿದ್ಧತೆಗಳು ನಡೆದಿವೆ. ಈಗ ತಾನೇ ಎಸ್ಸೆಸ್ಸೆಲ್ಸಿ ಪೂರೈಸಿ ಪಿಯುಸಿ ಕಾಲೇಜು ಮೆಟ್ಟಿಲು ಹತ್ತಲು ವಿದ್ಯಾರ್ಥಿಗಳು ಉತ್ಸಕರಾಗಿದ್ದಾರೆ. ದಾಖಲಾತಿಯೂ ಬಿರುಸುಗೊಂಡಿದೆ. ಆದರೆ, ಉಪನ್ಯಾಸಕರ ಕೊರತೆ ಅವರಲ್ಲಿ ಆತಂಕ ಮೂಡಿಸಿದೆ.


ಕೆಲ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಕಂಡುಬಂದಿದೆ. ಇವರ ಸ್ಥಾನಗಳಲ್ಲಿ ಅತಿಥಿ ಉಪನ್ಯಾಸಕರಿಂದ ಪಾಠ ಪ್ರವಚನ ಮಾಡಬೇಕಿದೆ. ಆದರೆ ಅತಿಥಿ ಉಪನ್ಯಾಸಕರ ನೇಮಕಾತಿ ಕೂಡ ವಿಳಂಬವಾಗುತ್ತಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಸಮಸ್ಯೆ ಸೃಷ್ಟಿಸಿದೆ.


ಜಿಲ್ಲೆಯಲ್ಲಿ 74 ಸರ್ಕಾರಿ ಪಿಯುಸಿ ಕಾಲೇಜುಗಳಿವೆ. ಮಂಜೂರಾದ 798ಹುದ್ದೆಗಳ ಪೈಕಿ 677 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, 121 ಹುದ್ದೆಗಳು ಖಾಲಿ ಇವೆ. ಈ ಕೊರತೆಯನ್ನು ಅತಿಥಿ ಉಪನ್ಯಾಸಕರ ನೇಮಕದ ಮೂಲಕ ನೀಗಿಸಿಕೊಳ್ಳಲು ಪರದಾಡಲಾಗುತ್ತಿದೆ.


ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳು ಹರಿದು ಬರುವುದು ನಿಶ್ಚಿತ. ಕಳೆದ ಎರಡ್ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದ ಮೈಸೂರು ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. 2022-23ನೇ ಸಾಲಿನಲ್ಲಿ ಶೇ.83ರಷ್ಟು ಫಲಿತಾಂಶದೊಂದಿಗೆ ಮೈಸೂರು ಜಿಲ್ಲೆ 19 ಸ್ಥಾನ ಪಡೆದಿತ್ತು. ಈ ಸಲ ಶೇ.87.19 ಫಲಿತಾಂಶ ಪಡೆದು 7 ಸ್ಥಾನಕ್ಕೆ ಜಿಗಿಯುವ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದೆ. 36,796 ವಿದ್ಯಾರ್ಥಿಗಳ ಪೈಕಿ 32,083 ಉತ್ತೀರ್ಣರಾಗಿದ್ದಾರೆ.

17, 847 ಬಾಲಕರು ಮತ್ತು 18, 949 ಬಾಲಕಿಯರು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 14,681 ಬಾಲಕರು ಮತ್ತು 17, 402 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗಿಂತ ಶೇ.4.19ರಷ್ಟು ಫಲಿತಾಂಶ ವೃದ್ಧಿಯಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪಿಯುಸಿ ಕಾಲೇಜಿನ ಕಡೆಗೆ ಮುಖ ಮಾಡಲಿದ್ದಾರೆ. ಇವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡುವ ಜತೆಗೆ ಗುಣಮಟ್ಟ ಶಿಕ್ಷಣವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಖಾತ್ರಿ ಪಡಿಸಬೇಕಿದೆ. ಆದರೆ, ಉಪನ್ಯಾಸಕರ ಕೊರತೆಯಿಂದ ಪಿಯುಸಿ ಕಾಲೇಜುಗಳು ನಲುಗುತ್ತಿವೆ.


ರಾಜ್ಯ ಶಾಸ್ತ್ರ, ಸಮಾಜಶಾಸ್ತ್ರ, ಗಣಿತಶಾಸ್ತ್ರ, ವಾಣಿಜ್ಯ, ಇಂಗ್ಲಿಷ್, ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸತ್ರ, ಜೀವಶಾಸ್ತ್ರ ವಿಷಯಗಳಿಗೆ ಕೊರತೆ ಇದೆ. ಈ ಕೊರತೆಯನ್ನು ನೀಗಿಸಿಕೊಳ್ಳಲು ಅತಿಥಿ ಉಪನ್ಯಾಸಕರಿಗೆ ಬೋಧನಾ ಕಾರ್ಯಭಾರವನ್ನು ವಹಿಸಿಲಾಗಿದೆ. ಇವರಿಂದ ಹೆಚ್ಚಿನ ನಿರೀಕ್ಷೆ ಮಾಡಲು ಆಗುತ್ತಿಲ್ಲ. ಕಾಯಂ ಬೋಧಕರಷ್ಟು ಇವರದ್ದು ಬೋಧನಾ ಕೆಲಸ ಪರಿಣಾಮಕಾರಿಯಾಗಿಲ್ಲ ಎಂಬುದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಳಲು ಆಗಿದೆ.


ಪಿಯು ಕಾಲೇಜುಗಳು ಜೂನ್‌ನಲ್ಲಿ ಆರಂಭವಾದಾಗ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲು ಇಲಾಖೆ ಸೂಚನೆ ನೀಡುತ್ತದೆ. ಆದರೆ 2-3 ತಿಂಗಳು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿಗಳಿಗೆ ಬೋಧಿಸುವ ಅನಿವಾರ್ಯತೆ ಇದೆ. ಸರ್ಕಾರ ಮಂಜೂರಾದ ಹುದ್ದೆಗಳಿಗೆ ತಕ್ಕಂತೆ ಉಪನ್ಯಾಸಕರನ್ನು ಭರ್ತಿ ಮಾಡಿದರೆ ಸಮಸ್ಯೆ ಇಲ್ಲ. ಆದರೆ, ಈ ವಿಚಾರವನ್ನು ಸರ್ಕಾರ ಸಮಸ್ಯೆಯಾಗಿ ಪರಿಗಣಿಸಿಲ್ಲ ಎಂದು ಸರ್ಕಾರಿ ಕಾಲೇಜು ಉಪನ್ಯಾಸಕರೊಬ್ಬರು ಹೇಳಿದರು.

ಅತಿಥಿ, ಪ್ರಭಾರ ಉಪನ್ಯಾಸಕ ನೇಮಕ:

ಜಿಲ್ಲೆಯ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಗಂಭೀರವಾಗಿಲ್ಲ. ಖಾಲಿ ಹುದ್ದೆಗಳಿಗೆ ಬೇರೆ ಕಾಲೇಜಿನಿಂದ ಪ್ರಭಾರ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ. ಜತೆಗೆ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ಹೇಳಿದರು.

ಸೊರಗಿ ಸರ್ಕಾರಿ ಕಾಲೇಜುಗಳು


ಖಾಸಗಿ ಪಿಯುಸಿ ಕಾಲೇಜುಗಳ ಮುಂದೆ ಸರ್ಕಾರಿ ಪಿಯುಸಿ ಕಾಲೇಜುಗಳು ಸ್ಪರ್ಧೆವೊಡ್ಡಲಾಗದೆ ಸೊರಗಿವೆ.


ಜಿಲ್ಲೆಯಲ್ಲಿ 291 ಕಾಲೇಜುಗಳಿವೆ. ಈ ಪೈಕಿ ಖಾಸಗಿ ಪಿಯುಸಿ ಕಾಲೇಜುಗಳ ಸಂಖ್ಯೆ ಅಧಿಕ. 181 ಖಾಸಗಿ ಪಿಯುಸಿ ಕಾಲೇಜು, 25 ಅನುದಾನಿತ ಪಿಯುಸಿ ಕಾಲೇಜುಗಳು, 74 ಸರ್ಕಾರಿ ಪಿಯುಸಿ, ತಲಾ 2 ಮೊರಾರ್ಜಿ, ಏಕಲವ್ಯ ವಸತಿ ಕಾಲೇಜುಗಳಿವೆ. ಮೈಸೂರು ನಗರದಲ್ಲೇ ಬಹಳಷ್ಟು ಖಾಸಗಿ ಪಿಯುಸಿ ಕಾಲೇಜುಗಳು ನೆಲೆಯೂರಿವೆ.

ನೀಟ್, ಸಿಇಟಿ ಸೇರಿದಂತೆ ವಿವಿಧ ವೃತ್ತಿಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೂ ಕೋಚಿಂಗ್ ಸಹ ನೀಡುತ್ತಿವೆ. ಆದ್ದರಿಂದ ಈ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಸರ್ಕಾರಿ ಪಿಯುಸಿ ಕಾಲೇಜುಗಳತ್ತ ಗ್ರಾಮಾಂತರ, ಬಡವರ ಮಕ್ಕಳು ಬರುತ್ತಿದ್ದಾರೆ ಎಂದು ಸರ್ಕಾರಿ ಕಾಲೇಜು ಉಪನ್ಯಾಸಕರೊಬ್ಬರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net