ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

MND WORKER
Published on

ಮುಂಡಗೋಡ: ತಾಲೂಕಿನಲ್ಲಿ ಕಬ್ಬು ಬೆಳೆ ಕಟಾವು ಮಾಡಲು ಕಾರ್ಮಿಕರ ಕೊರತೆ ಎದುರಾಗಿದ್ದು, ಮಹಾರಾಷ್ಟ್ರ ಭಾಗದಿಂದ ಕಾರ್ಮಿಕರನ್ನು ಕರೆಸಲಾಗುತ್ತಿದೆ.

ಪಕ್ಕದ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ಆರಂಭವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕಳೆದ 2-3 ವರ್ಷಗಳಿಂದ ಕಬ್ಬು ಬೆಳೆಗಾರರ ಸಂಖ್ಯೆ ಜಾಸ್ತಿಯಾಗಿದೆ.

ತಾಲೂಕಿನಲ್ಲಿ ಈ ವರ್ಷ ಅತಿಕ್ರಮಣ ಭೂಮಿಯೂ ಸೇರಿದಂತೆ ಒಟ್ಟು 2000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇದೀಗ ಕಬ್ಬು ಕಟಾವು ಹಂತಕ್ಕೆ ಬಂದಿದ್ದು ಕೆಲವು ರೈತರು ಕಬ್ಬು ಕಟಾವು ಆರಂಭಿಸಿದ್ದಾರೆ.

ತಾಲೂಕಿನಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಗೇನೂ ಬರವಿಲ್ಲ. ಆದರೆ ಕಬ್ಬು ಕಟಾವು ಮಾಡುವ ಕಾರ್ಮಿಕರ ಸಂಖ್ಯೆ ಮಾತ್ರ ಬೆರಳೆಣೆಕೆಯಷ್ಟಿದೆ. ಇದರಿಂದಾಗಿ ತಾಲೂಕಿನಲ್ಲಿ ಕಬ್ಬು ಕಟಾವು ಮಾಡುವ ಕಾರ್ಮಿಕರ ಕೊರತೆ ಹೆಚ್ಚಾಗಿದೆ.

ತಾಲೂಕಿನ ತಮ್ಯಾನಕೊಪ್ಪ, ಅಗಡಿ ಗ್ರಾಮದಲ್ಲಿರುವ ಕೆಲವು ಲಂಬಾಣಿ ಜನರು ಕಬ್ಬು ಕಟಾವು ಮಾಡುತ್ತಾರೆ. ಇವರು ಕಬ್ಬು ಕಟಾವು ಮಾಡಲು ಹತ್ತಾರು ಜನರ ತಂಡಗಳನ್ನು ರಚಿಸಿ ಪಕ್ಕದ ಮಹಾರಾಷ್ಟ್ರ ರಾಜ್ಯದತ್ತ ಹೋಗುತ್ತಾರೆ. ಇದೂ ಕೂಡ ತಾಲೂಕಿನ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಕಬ್ಬು ಕಟಾವು ಮಾಡುವುದಕ್ಕೆ ಒಂದು ಟನ್ ಕಬ್ಬಿಗೆ ಆರಂಭದಲ್ಲಿ 200ರಿಂದ 300 ರೂ. ನೀಡಲಾಗುತ್ತದೆ. ಒಬ್ಬ ಕಾರ್ಮಿಕ ಒಂದು ದಿನಕ್ಕೆ ಮೂರು ಟನ್ ಕಬ್ಬು ಕಟಾವು ಮಾಡುತ್ತಾನೆ.

ಹಾಗಾಗಿ ಸ್ಥಳೀಯ ಕೃಷಿ ಕಾರ್ಮಿಕರು ಕೂಲಿ ಕೆಲಸಗಳಿಲ್ಲ ಎಂದು ಕಾಲಹರಣ ಮಾಡುವ ಬದಲು ಕಬ್ಬು ಕಟಾವು ಮಾಡುವ ಕೆಲಸವನ್ನು ರೂಢಿಸಿಕೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಕಬ್ಬು ಬೆಳೆಗಾರರದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net