

ಕೆ.ಆರ್.ಸಾಗರ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ 2ನೇ ಬೆಟಾಲಿಯನ್ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇವಲ ನಾಲ್ಕು ಮಹಿಳಾ ಪೊಲೀಸರು, ಪ್ರತಿನಿತ್ಯ ಸಾವಿರಾರು ಮಹಿಳಾ ಪ್ರವಾಸಿಗರನ್ನು ತಪಾಸಣೆ ನಡೆಸಬೇಕಿದೆ. ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಿರುವುದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟೆ, ಬೃಂದಾವನ ವೀಕ್ಷಣೆಗೆಂದು ಬರುವವರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಈಗ ದಸರಾ ನಡೆಯುತ್ತಿರುವುದರಿಂದ ಆ ಪ್ರಮಾಣ ದ್ವಿಗುಣಗೊಂಡಿರುತ್ತದೆ. ಆದರೆ ಮಹಿಳಾ ಪ್ರವಾಸಿಗರನ್ನು ತಪಾಸಣೆ ನಡೆಸಲು ಅಗತ್ಯ ಸಿಬ್ಬಂದಿ ಇಲ್ಲ. ಇರುವವರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಐವರಷ್ಟೇ ಕರ್ತವ್ಯ ನಿರ್ವಹಣೆ: ಕೆಆರ್‌ಎಸ್‌ನ ಮುಖ್ಯ ಮೂರು ಮುಖ್ಯದ್ವಾರ ಸೇರಿದಂತೆ ವಿವಿಧೆಡೆ ಕೆ.ಆರ್.ಸಾಗರ ಅಣೆಕಟ್ಟೆ ಭದ್ರತೆಗೆ 261 ಪೊಲೀಸ್ ಸಿಬ್ಬಂದಿ ಅವಶ್ಯಕತೆ ಇದೆ. ಆದಾಗ್ಯೂ ಪ್ರಾರಂಭದಲ್ಲಿಯೇ ಕೇವಲ 70 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದರಲ್ಲಿ 65 ಪುರುಷ ಹಾಗೂ ಐವರು ಮಹಿಳಾ ಸಿಬ್ಬಂದಿ. ಇನ್ನೂ ನೂರಕ್ಕೂ ಹೆಚ್ಚು ಸಿಬ್ಬಂದಿ ಬೇಕಿದೆ.
ಈ ನಡುವೆಯೇ ಒಂದೇ ಸ್ಥಳದಲ್ಲಿ ಐದು ವರ್ಷ ಕೆಲಸ ಮಾಡಿದ ಆಧಾರದ ಮೇಲೆ ಪುರುಷ ಹಾಗೂ ಮಹಿಳೆ ಸೇರಿದಂತೆ 31 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಯಿತು. ಇದೇ ರೀತಿ ವರ್ಗಾವಣೆಯಾಗಿ 25 ಮಾತ್ರ ವಾಪಸ್ ಬಂದಿದ್ದಾರೆ. ಪ್ರಸ್ತುತ ಮಹಿಳಾ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಮಹಿಳಾ ಸಿಬ್ಬಂದಿಯಷ್ಟೇ ಇದ್ದಾರೆ. ಈ ಪೈಕಿ ಒಬ್ಬರು ಆರೋಗ್ಯದ ಕಾರಣ ರಜೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಳಿದವರೇ ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ರವರೆಗೆ ಮಹಿಳಾ ಪ್ರವಾಸಿಗರ ಪರಿಶೀಲನೆ ಮಾಡಬೇಕಿದೆ.
ನಿಯೋಜನೆ ಅನಿವಾರ್ಯ: ನಿರಂತರ ಕರ್ತವ್ಯ ನಿರ್ವಹಣೆಯಿಂದಾಗಿ ಸಿಬ್ಬಂದಿ ಬಳಲುತ್ತಿದ್ದಾರೆ. ಈ ಪೈಕಿ ಮತ್ತೆ ಯಾರಾದರೂ ರಜೆ ಹಾಕಿದರೆ ಉಳಿದವರೇ ಜವಾಬ್ದಾರಿ ಹೊರಬೇಕಾಗುತ್ತದೆ. ಪರಿಣಾಮ ಅವರ ಮೇಲೆ ಒತ್ತಡ ಹೆಚ್ಚಾಗಲಿದೆ. ಮಾತ್ರವಲ್ಲದೆ ಬರುವ ಎಲ್ಲ ಮಹಿಳಾ ಪ್ರವಾಸಿಗರನ್ನು ಪರಿಶೀಲನೆ ಮಾಡುವುದು ಕಷ್ಟವಾಗಲಿದೆ. ಇದನ್ನೇ ದುರುಪಯೋಗಪಡಿಸಿಕೊಂಡು ಹಾಗೂ ಜನಸಂದಣಿ ಹೆಚ್ಚಾಗಿರುವುದನ್ನೇ ನೆಪವಾಗಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಒಟ್ಟಾರೆ ಹಿರಿಯ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಅಣೆಕಟ್ಟೆ ಸುರಕ್ಷತೆ ಮರೀಚಿಕೆಯಾಗುತ್ತಿರುವುದು ಒಂದೆಡೆಯಾದರೆ, ಮಹಿಳಾ ಸಿಬ್ಬಂದಿ ಮೇಲೆಯೂ ತೀವ್ರ ಒತ್ತಡ ಹೆಚ್ಚುವಂತಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ.
ಧೂಳು ಹಿಡಿಯುತ್ತಿರುವ ಬ್ಯಾಗ್ ಸ್ಕ್ಯಾನರ್
ಸುಮಾರು ನಾಲ್ಕೈದು ವರ್ಷದ ಹಿಂದೆ ಭಾರೀ ಮಳೆ, ಗಾಳಿಯಿಂದ ಬ್ಯಾಗ್ ಸ್ಕ್ಯಾನರ್ ರೂಂ ಹಾಳಾಗಿ, ಅದರಲ್ಲಿದ್ದ ಯಂತ್ರಗಳು ಕೆಟ್ಟು ಧೂಳು ಕುಡಿಯುತ್ತಿದೆ. ಆದಾಗ್ಯೂ ಇಲ್ಲಿಯವರೆಗೂ ರಿಪೇರಿ ಕಂಡಿಲ್ಲ. ಭದ್ರತಾ ಸಿಬ್ಬಂದಿ ಕೆಲವೊಮ್ಮೆ ಗ್ಲೌಸ್ ಧರಿಸಿ ಹಾಗೂ ಬರಿಗೈಯಲ್ಲಿ ಪ್ರವಾಸಿಗರ ಬ್ಯಾಗ್ ಹಾಗೂ ಇತರೆ ವಸ್ತುಗಳನ್ನು ತಪಾಸಣೆ ಮಾಡುತ್ತಾರೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಮತ್ತೊಂದೆಡೆ ಲಕ್ಷಾಂತರ ರೂ ವೆಚ್ಚ ಮಾಡಿ ಅಳವಡಿಸಿರುವ 40ಕ್ಕೂ ಹೆಚ್ಚು ಸಿ.ಸಿ ಕ್ಯಾಮರಾ ಪೈಕಿ ಕೆಲವರು ಹಾಳಾಗಿವೆ. ಅವುಗಳನ್ನು ರಿಪೇರಿ ಮಾಡಿಸಿಲ್ಲ. ಟೋಲ್ ನಿರ್ವಹಣೆ ಮಾಡುವ ಖಾಸಗಿ ಕಂಪನಿಯವರು ಹಾಕಿರುವ ಕ್ಯಾಮರಾ ಮಾತ್ರ ನಿರ್ವಹಿಸುತ್ತಿದೆ.
ಅಣೆಕಟ್ಟೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಇರುವ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಶೀಘ್ರವಾಗಿ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗುವುದಾಗಿ ತಿಳಿಸಿದ್ದಾರೆ. ಪ್ರವಾಸಿಗರ ತಪಾಸಣೆಗೆಂದು ಇರುವ ಬ್ಯಾಗ್ ಸ್ಕಾನರ್ ಹಾಗೂ ಹಲವಾರು ಸಿ.ಸಿ ಕ್ಯಾಮರಾ ದುರಸ್ತಿಯಾಗಬೇಕಿದೆ. ಇದರ ಬಗ್ಗೆ ಕಾವೇರಿ ನೀರಾವರಿ ನಿಗಮಕ್ಕೆ ಮಾಹಿತಿ ನೀಡಲಾಗಿದೆ.ಪ್ರಮೋದ್ಅಸ್ಟಿಟೆಂಟ್ ಕಮಾಡೆಂಟ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ