

ಕೊಳ್ಳೇಗಾಲ: ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಪಶು ವ್ಯೆದ್ಯರ ಸಮಸ್ಯೆಯಿದ್ದು ರೈತರ ಜಾನುವಾರುಗಳ ಚಿಕಿತ್ಸೆಗೆ ಬಹಳ ಸಮಸ್ಯೆ ಆಗಿದೆ ಎಂದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಗಮನ ಸೆಳೆದರು.
ಗುರುವಾರ ನಡೆದ ವಿಧಾನಮಂಡಲ ಕಲಾಪದಲ್ಲಿ ಮಾತನಾಡಿದರು. ಶಾಸಕರ ಪ್ರಶ್ನೆಗೆ ರೇಷ್ಮೆ ಹಾಗೂ ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಪಶು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು 18 ಸಾವಿರ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಶ್ಯತೆ ಇದೆ. ಸದ್ಯ 9 ಸಾವಿರ ಜನರು ಮಾತ್ರ ಇದ್ದಾರೆ. ವ್ಯೆದ್ಯರು, ಇನ್ಸ್‌ಪೆಕ್ಟರ್‌ಗಳು, ಡಿ ಗ್ರೂಪ್ ನೌಕರರ ಕೊರತೆ ಇದೆ. ನಾನು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಆದ ಕಾರಣ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದೇನೆ. ಇಡೀ ರಾಜ್ಯದೆಲ್ಲೆಡೆ ಅಧಿಕಾರಿಗಳ ಹಾಗೂ ಸಿಬ್ಬಂದಿ ನೇಮಕ ವಿಚಾರದಲ್ಲಿ ಒತ್ತಡವಿದೆ. ಇತ್ತೀಚೆಗೆ ಸರ್ಕಾರದಲ್ಲಿ 400 ಜನರನ್ನು ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಅವಕಾಶ ದೊರೆತಿದೆ. ಅದರಲ್ಲಿ, ಚಾಮರಾಜನಗರದಲ್ಲಿ ಒತ್ತಡ ಇರುವುದರಿಂದ ಆದ್ಯತೆ ನೀಡಲಾಗುವುದು ಎಂದರು.