

ಹನೂರು: ತಾಲೂಕಿನ ಹೂಗ್ಯಂ ಭಾಗದ ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಿಂದ ಸುಮಾರು 30 ಕಿ.ಮೀ. ಅಂತರ ಹೊಂದಿರುವ ಹೂಗ್ಯಂ ಭಾಗದಲ್ಲಿ ದಿನ್ನಳ್ಳಿ, ಮಿಣ್ಯಂ, ಕೊಪ್ಪ, ಗಾಜನೂರು ಸೇರಿದಂತೆ ಸುಮಾರು ಹತ್ತಾರು ಗ್ರಾಮಗಳಿದ್ದು, ಕಾಡಂಚಿನಲ್ಲಿವೆ. ಇಲ್ಲಿನ ಜನರು ಕೆಲಸ ಕಾರ್ಯಗಳ ನಿಮಿತ್ತ ರಾಮಾಪುರ, ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಗೆ ನಿತ್ಯ ತೆರಳಬೇಕಿದೆ. ಜತೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಸಂಚರಿಸಬೇಕಿದೆ. ಆದರೆ ಸಮರ್ಪಕ ಬಸ್ ಸೌಕರ್ಯವನ್ನು ಒದಗಿಸಿಲ್ಲ. ಇದರಿಂದ ಬಸ್ಸಿಗಾಗಿ ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ಅಲ್ಲದೇ ದುರಸ್ತಿ ಕಾರಣದಿಂದ ಕೆಲವೊಂದು ದಿನಗಳಲ್ಲಿ ಬಸ್ ಬರುವುದೇ ಇಲ್ಲ. ಇದರಿಂದ ಇಲ್ಲಿನ ಜನರು ಆಟೋ ಹಾಗೂ ಗೂಡ್ಸ್ ವಾಹನದ ಮೂಲಕ ಸಂಚರಿಸುವಂತಹ ಪರಿಸ್ಥಿತಿ ಇದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಭಾಗದಲ್ಲಿ ಬಸ್‌ನದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ.
ಈ ಭಾಗಕ್ಕೆ ಬೆರಳೆಣಿಕೆ ಬಸ್‌ಗಳು ಮಾತ್ರ ಸಂಚರಿಸುತ್ತಿರುವುದರಿಂದ ಕಾರ್ಯನಿಮಿತ್ತ ಇಲ್ಲಿನ ಜನರು ಹನೂರು ಹಾಗೂ ರಾಮಾಪುರಕ್ಕೆ ಆಗಮಿಸಿ ಊರಿಗೆ ತೆರಳಬೇಕಾದರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಿದ್ದು, ಆಗಮಿಸುವ ಬಸ್‌ಗೆ ನೂಕು ನುಗ್ಗಲಿನಲ್ಲೇ ತೆರಳಿ ನಿಂತುಕೊಂಡೇ ಪ್ರಯಾಣಿಸಬೇಕಿದೆ. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಇತ್ತ ಸಮರ್ಪಕ ಬಸ್ ಸೌಕರ್ಯ ಇಲ್ಲದ ಪರಿಣಾಮ ಮಹಿಳೆಯರು ವಿಧಿಯಿಲ್ಲದೆ ಖಾಸಗಿ ಬಸ್‌ಗಳ ಮೊರೆ ಹೋಗಬೇಕಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಯ ಮಹಿಳೆಯರ ಉಚಿತ ಪ್ರಯಾಣ ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಸಮರ್ಪಕ ಬಸ್ ಸೌಕರ್ಯ ಒದಗಿಸುವುದರ ಮೂಲಕ ಅನುಕೂಲ ಕಲ್ಪಿಸುವಂತೆ ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.