

ಪ್ರಶಾಂತ ಭಾಗ್ವತ, ಉಡುಪಿ
ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಉಡುಪಿ ಜಿಲ್ಲೆಯ ವಿದ್ಯುತ್ ಇಲಾಖೆಗೆ ಈಗಲೇ ತಲೆಬಿಸಿ ಆರಂಭವಾಗಿದೆ. ವರ್ಷದಲ್ಲಿ 8 ತಿಂಗಳು ಅನೇಕ ಕೊರತೆಗಳ ನಡುವೆಯೂ ಹೇಗೋ ಕೆಲಸ ನಿಭಾಯಿಸುವ ಅಧಿಕಾರಿಗಳಿಗೆ ಈಗ 'ಪವರ್ಮ್ಯಾನ್' ಶಾಕ್ ತಗುಲಿದೆ.
ಜಿಲ್ಲೆಯಲ್ಲಿ ಶೇ.50ರಷ್ಟು ಲೈನ್ಮೆನ್ ಕೊರತೆ ಇದ್ದು, ಮಳೆಗಾಲದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಿಲು ಇಲಾಖೆಗೆ ತೊಡಕಾಗಲಿದೆ. ಪ್ರಸ್ತುತ 565 ಪವರ್ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದು, 483 ಹುದ್ದೆ ಖಾಲಿ ಇದೆ.!!!
ಗುಡುಗು-ಸಿಡಿಲು ಸಹಿತ ಮಳೆ ಬಂತೆಂದರೆ ಸಣ್ಣ ಮಕ್ಕಳು ಹೆದರುವಂತೆಯೇ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಸ್ತುತ ಕೆಲಸದಲ್ಲಿರುವ ಪವರ್ಮ್ಯಾನ್ಗಳಿಗೂ ನಡುಕ ಹುಟ್ಟಿಸುತ್ತವೆ. ಭಾರಿ ಗಾಳಿಮಳೆ ಬಂದರೆ ಗಿಡ-ಮರಗಳು ಉರುಳಿ ಅಪಾರ ಸಂಖ್ಯೆಯಲ್ಲಿ ವಿದ್ಯುತ್ ಕಂಬ ಹಾಗೂ ಟಿಸಿಗಳು ಧರೆಗುರುಳುತ್ತವೆ. ದಿನದ ಕತ್ತಲು ಕವಿಯುವುದರೊಳಗೆ ಸರಿಪಡಿಸಿ ಜನರಿಗೆ ರಾತ್ರಿ ವೇಳೆ ಕರೆಂಟ್ ಕೊಡಲೇಬೇಕಾದ 'ಒತ್ತಡ'ದಲ್ಲಿ ಕೆಲಸ ಮಾಡಬೇಕಿದೆ. ಹೀಗಾಗಿ ಸಿಬ್ಬಂದಿ ಕೊರತೆಯಿಂದ ಇರುವ ಲೈನ್ಮೆನ್ಗಳಿಗೆ ಅನಿವಾರ್ಯವಾಗಿ ಹೆಚ್ಚಿನ ಕೆಲಸ ಮಾಡಲೇಬೇಕಿದೆ.
ಮೇ 14ರಂದು ಮಧ್ಯಾಹ್ನ ಜಿಲ್ಲೆಯಲ್ಲಿ ಒಂದೆರಡು ಗಂಟೆ ಸುರಿದ ಸಾಧಾರಣ ಗಾಳಿಮಳೆಗೆ ಗಿಡ-ಮರಗಳು ಉರುಳಿದ್ದರಿಂದ 120 ವಿದ್ಯುತ್ ಕಂಬಗಳು ಹಾನಿಗೊಂಡಿದೆ. 7 ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿದೆ. ಸುಮಾರು 1.3 ಕಿಮೀ ವ್ಯಾಪ್ತಿಯಲ್ಲಿ ತಂತಿಗಳು ತುಂಡಾಗಿ ಅಪಾರ ಹಾನಿಯೂ ಸಂಭವಿಸಿದೆ. ಇದೀಗ ಪವರ್ಮ್ಯಾನ್ಗಳು ಉರುಳಿರುವ ಕಂಬ ತೆರವು ಮಾಡಿ ಹೊಸ ಕಂಬ ಅಳವಡಿಸಿ, ತಂತಿ ಜೋಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಳೆಗಾಲದಲ್ಲಿ ತೊಂದರೆ ಕೊಡಬಹುದಾದ ಒಣಗಿದ ಗಿಡ-ಮರಗಳ ಕಟಾವಿಗೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಎರಗಿದ ಮರದ ರೆಂಬೆ-ಕೊಂಬೆ ಕತ್ತರಿಸಲು ಉಡುಪಿ ಮೆಸ್ಕಾಂಗೆ 138 ಗ್ಯಾಂಗ್ಮನ್ರನ್ನು ನೀಡಲಾಗಿದೆ. ಅವರೆಲ್ಲ ಇದೀಗ ನಗರಸಭೆಯ ವ್ಯಾಪ್ತಿಯ ಪ್ರಮುಖ ರಸ್ತೆ, ವಿವಿಧ ಸರ್ಕಾರಿ ಕಚೇರಿ ಸುತ್ತಮುತ್ತ ಹಾಗೂ ಬೃಹತ್ ವಸತಿ ಸಮುಚ್ಚಯ ಇರುವ ಕಡೆಗಳಲ್ಲಿ ವಿದ್ಯುತ್ ತಂತಿಗೆ ತಾಗಿರುವ ರೆಂಬೆಗಳ ಕಟಾವಿನಲ್ಲಿ ನಿರತರಾಗಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪವರ್ಮ್ಯಾನ್ಗಳ ಕೊರತೆ ಇದೆ. ಅವರ ಭರ್ತಿ ಕಾರ್ಯ ಸರ್ಕಾರದ ಮಟ್ಟದಲ್ಲೇ ಆಗಬೇಕಿದ್ದರಿಂದ ಉಡುಪಿ ಜಿಲ್ಲೆಯೂ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಜಿಲ್ಲೆಗಳಲ್ಲೂ ಸಹ ಸಿಬ್ಬಂದಿ ಕೊರತೆ ಇದೆ. ಸರ್ಕಾರ 'ಗ್ಯಾರಂಟಿ' ಯೋಜನೆ ಮೂಲಕ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡಿದ್ದರಿಂದ ಲಾನುಭವಿಗಳು ಸಂತಸದಲ್ಲಿದ್ದಾರೆ. ಆದರೆ, ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಗಳಿಲ್ಲದೆ ವಿದ್ಯುತ್ ಇಲಾಖೆ ಪರದಾಡುತ್ತಿದೆ.
ಹೆಬ್ರಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಉರುಳಿರುವುದು.
ಮಳೆಯಿಂದಾಗಿ ಕೋಟದಲ್ಲಿ ವಿದ್ಯುತ್ ಕಂಬ ಧರೆಗುರುಳಿದ್ದು, ಸರಿಪಡಿಸುತ್ತಿರುವ ಮೆಸ್ಕಾಂ ಸಿಬ್ಬಂದಿ.
ಮೇ 14ರಂದು ಸುರಿದ ಮಳೆಗೆ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನ 12 ಕುಟುಂಬಗಳ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಬಾಬಿ ಹಾಗೂ ಗುಲಾಬಿ ಎನ್. ಶೆಟ್ಟಿ, 52 ಹೇರೂರು ಗ್ರಾಮದ ಸುನೀಲ್ ಡಿಸೋಜ ಅವರ ಮನೆ ಭಾಗಶ: ಹಾನಿಯಾಗಿದೆ. ಕುಂದಾಪುರ ತಾಲೂಕಿನ ಹೊಸಂಗಡಿಯ ಪ್ರೇಮಾ ಆಚಾರಿ, ಮೊಳಹಳ್ಳಿಯ ನಾಗು ಶೆಟ್ಟಿ, ಕಾಡ್ತಿ, ರಾಜು, ಹಾಗೂ ಬೆಳ್ಳಿ ಅವರ ಮನೆ ಹಾನಿಯಾಗಿದೆ. ಸಿದ್ದಾಪುರ ಗ್ರಾಮದ ಪ್ರಭಾಕರ ಭಟ್, ರಾಗವೇಂದ್ರ ಭಟ್, ಶಾರದಾ ಭಟ್, ಉಳ್ಳೂರಿನ ಶಂಕರ ಮಡಿವಾಳ ಅವರ ಮನ ಭಾಗಶ: ಹಾನಿಯಾಗಿದ್ದು, ಕನಿಷ್ಠ 10 ಸಾವಿರದಿಂದ ಗರಿಷ್ಠ 75 ಸಾವಿರ ರೂ.ವರೆಗೆ ಹಾನಿಯಾಗಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಗೊಂಡಿದ್ದಾಗಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಲೈನ್ಮೆನ್ಗಳ ಕೊರತೆ ಇರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಮುಂಗಾರು ಪೂರ್ವ ಮಳೆ ಆರಂಭಗೊಂಡಿದ್ದರಿಂದ ಜಿಲ್ಲೆಯಲ್ಲಿ ಅಪಾಯ ತರಬಹುದಾದ ಗಿಡ&ಮರಗಳ ಟೊಂಗೆ ಕಟಾವು ಕಾರ್ಯ ಆರಂಭಿಸಲಾಗಿದೆ. ಈ ಕೆಲಸಕ್ಕಾಗಿ 138 ಗ್ಯಾಂಗ್ಮನ್ಗಳನ್ನು ಜಿಲ್ಲೆಗೆ ನೀಡಲಾಗಿದೆ. ದಿನೇಶ್ ಉಪಾಧ್ಯ. ಅಧೀಕ್ಷಕ ಇಂಜಿನಿಯರ್. ಮೆಸ್ಕಾಂ, ಉಡುಪಿ