ತುಮಕೂರು ಜಿಲ್ಲೆಗೆ 7 ಟಿಎಂಸಿ ಹೇಮೆ ಖೋತಾ!

hemavathijpeg
Published on

ತುಮಕೂರು: ಹಾಸನ ಹಾಗೂ ಮಂಡ್ಯ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಕ್ಯಾತೆಯಿಂದ ಈ ವರ್ಷ ತುಮಕೂರು ಜಿಲ್ಲೆಗೆ 7 ಟಿಎಂಸಿ ‘ಹೇಮೆ’ನೀರು ಖೋತಾ ಆಗಲಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮದಂತೆ ಮೇ 30ರವರೆಗೆ ಹೇಮಾವತಿ ಜಲಾಶಯದಿಂದ ಜಿಲ್ಲೆಯ ಪಾಲಿನ ಈ ವರ್ಷದ ನೀರು ಪಡೆಯಬಹುದಾಗಿದ್ದು, ಇದಕ್ಕೆ ಹಾಸನದ ಜನಪ್ರತಿನಿಧಿಗಳು ತಡೆಯೊಡ್ಡಿದ್ದಾರೆ. ಮೇ 1ರಂದು ಕುಡಿಯುವ ನೀರಿನ ಯೋಜನೆಗಳ ಕೆರೆ-ಕಟ್ಟೆಗಳಿಗೆ ಜಿಲ್ಲೆಯ ಪಾಲಿನ 7 ಟಿಎಂಸಿ ನೀರನ್ನು ಹೇಮಾವತಿ ಜಲಾಶಯದಿಂದ ಹರಿಸಲು ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ಹಾಸನ ಹಾಗೂ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ತಕರಾರು ತೆಗೆದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ‘ಹೇಮೆ’ ನೀರು ಹರಿಸದಂತೆ ಸೂಚನೆ ನೀಡಿರುವುದು ಹಾಸನ, ತುಮಕೂರು ಜಿಲ್ಲೆಯ ನಡುವಿನ ಜಲಜಗಳ ತಾರಕಕ್ಕೇರಲು ಕಾರಣವಾಗಿದೆ.

ಜಲಸಂಕಷ್ಟ: ಜಿಲ್ಲಾ ಕೇಂದ್ರ ತುಮಕೂರು ಸೇರಿ 8 ತಾಲೂಕು ಕೇಂದ್ರಗಳಿಗೆ ಹಾಗೂ ಮಾರ್ಗಮಧ್ಯದ ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸುವುದಕ್ಕೆ ತಡೆಯೊಡ್ಡಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಗಂಭೀರ ಸಮಸ್ಯೆ ತಲೆದೋರಲಿದೆ. ಹೇಮೆ ಯೋಜನೆಯಲ್ಲಿ ಜಿಲ್ಲೆಗೆ 25.3 ಟಿಎಂಸಿ ನೀರು ಮಂಜೂರಾಗಿದ್ದು, ಕಳೆದ ಆಗಸ್ಟ್‌ನಿಂದ ಈ ವರ್ಷ ಜನವರಿ 22 ರವರೆಗೆ 2 ಹಂತಗಳಲ್ಲಿ ನೀರು ಹರಿಸಲಾಗಿದೆ. ಇದುವರೆಗೆ 17 ರಿಂದ 18 ಟಿಎಂಸಿ ನೀರು ಮಾತ್ರ ಜಿಲ್ಲೆಗೆ ಹರಿದಿದ್ದು, ಉಳಿದ 7 ಟಿಂಎಂಸಿ ನೀರನ್ನು ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಈಗ ಕುಡಿಯುವ ನೀರಿಗೆ ಜಿಲ್ಲೆಯ ಪಾಲಿನ ಹೇಮೆ ನೀರು ಪಡೆದುಕೊಳ್ಳಲು ಮುಂದಾದಾಗ ಹಾಸನ, ಮಂಡ್ಯದ ಜೆಡಿಎಸ್ ಶಾಸಕರು ಖ್ಯಾತೆ ತೆಗೆದಿದ್ದಾರೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮದ ಪ್ರಕಾರ ಮೇ 30ರೊಳಗೆ ಈ ವರ್ಷದ ಹೇಮೆ ನೀರು ಹರಿಸಲು ಅವಕಾಶವಿದೆ. ಜಲಜಗಳ ತೆಗೆದಿರುವ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಗೆ ಕುಡಿವ ನೀರಿಗಾಗಿ ಹೇಮೆ ಹರಿಸಬೇಕಿದೆ.

ಪ್ರಾಧಿಕಾರದ ನಿಯಮ ಅಡ್ಡಿ : ಹೇಮಾವತಿ ಅಣೆಕಟ್ಟೆಯಲ್ಲಿ ಬಳಕೆಗೆ ಯೋಗ್ಯವಾದ 11 ಟಿಎಂಸಿ ನೀರು ಲಭ್ಯವಿದೆ. ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ನಿಗದಿಯಾಗಿರುವ ಹೇಮೆ ನೀರು ಬಳಸಿಕೊಂಡಿರುವುದರಿಂದ ಮತ್ತೊಮ್ಮೆ ಆ ಭಾಗಕ್ಕೆ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಅಡ್ಡಿಯಾಗಿದ್ದಾರೆ. ಹಾಗಾಗಿ, ತುಮಕೂರು ಜಿಲ್ಲೆಗೆ ಮಾತ್ರವೇ ನೀರು ಬಿಡಲು ಸಚಿವ ಮಾಧುಸ್ವಾಮಿ ಸೂಚಿಸಿದ್ದರು. ಸಚಿವರು ತುಮಕೂರಿನವರಾಗಿರುವುದರಿಂದ ಆ ಭಾಗದ ರಾಜಕಾರಣಿಗಳು ತಗಾದೆ ತೆಗೆದಿದ್ದಾರೆ.

ಒತ್ತಡಕ್ಕೆ ಮಣಿದ ಸಿಎಂ!: ಹಾಸನ, ಮಂಡ್ಯದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದ ಸಿಎಂ ಯಡಿಯೂರಪ್ಪ ಅವರು ಕುಡಿಯುವ ಸಲುವಾಗಿ ಜಿಲ್ಲೆಗೆ ಹೇಮೆ ನೀರು ಹರಿಸುವ ಆದೇಶಕ್ಕೆ ತಡೆ ನೀಡಿದ್ದಾರೆ. ಜಿಲ್ಲೆಗೆ ನಿಗದಿಯಾಗಿರುವ 25.3 ಟಿಎಂಸಿ ನೀರಿನ ಪೈಕಿ ಈವರೆಗೆ 18 ಟಿಎಂಸಿ ನೀರು ಹರಿದಿದೆ. ಹಾಗಾಗಿ, ಉಳಿದ 7 ಟಿಎಂಸಿ ನೀರು ಹರಿಸಿ ಕುಡಿಯುವ ನೀರಿನ ಸಂಕಷ್ಟ ಬಗೆಹರಿಸಬೇಕಿದೆ.

ಹೇಮೆ ತಮಿಳುನಾಡು ಪಾಲು: ಹೇಮೆ ನೀರು ಹಂಚಿಕೆ ವಿಚಾರದಲ್ಲಿ ಹಾಸನ ಹಾಗೂ ತುಮಕೂರು ಜಿಲ್ಲೆ ನಡುವಿನ ಜಗಳದಿಂದ ಅಣೆಕಟ್ಟೆಯಲ್ಲಿ ಉಳಿಯುವ ನೀರು ತಮಿಳುನಾಡು ಪಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತರ ಜಿಲ್ಲಾ ನೀರಿನ ವಿವಾದದಿಂದ ಹೇಮೆ ನೀರು ಮೂರನೆಯವರ ಪಾಲಾಗಲಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಯಮದಂತೆ ಮೇ 30ರೊಳಗೆ ಈ ವರ್ಷದ ನಮ್ಮ ಪಾಲಿನ ನೀರು ಪಡೆಯಬಹುದಾಗಿದೆ. ಇಲ್ಲದಿದ್ದರೆ ಈ ವರ್ಷ ನಮ್ಮ ಪಾಲು ಸಿಗುವುದಿಲ್ಲ. ಗುರುವಾರ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನೀರು ಹರಿಸಲು ಕ್ರಮವಹಿಸಲಾಗುವುದು. ಜೆ.ಸಿ.ಮಾಧುಸ್ವಾಮಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net