

ಮಂಡ್ಯ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಕಿರು ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿಕೊಳ್ಳಿ. ಬಳಿಕ ವಿಷಯವಾರು ಪರಿಹಾರ ಬೋಧನೆ ನಡೆಸಲೇಬೇಕು. ಈ ಮೂಲಕ ಮುಂದಿನ ಕಿರು ಪರೀಕ್ಷೆಯಲ್ಲಿ ಉರ್ತ್ತೀರಾಗುವಂತೆ ಸಿದ್ಧಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಡ್ಯ ಮತ್ತು ಪಾಂಡವಪುರ ಉಪವಿಭಾಗದ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯಶಿಕ್ಷಕರೊಂದಿಗೆ ಆಯೋಜಿಸಿದ್ದ ಪಠ್ಯ ಚಟುವಟಿಕೆ ಹಾಗೂ ಕಿರು ಪರೀಕ್ಷೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ಫಲಿತಾಂಶವಿರುವ ಶಾಲೆಯ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಅಂತೆಯೇ ಈಗ ಅನುತ್ತೀರ್ಣವಾಗುವ ವಿದ್ಯಾರ್ಥಿಗಳ ಸಂಖ್ಯೆ ಮುಂದಿನ ಸಭೆ ವೇಳೆಗೆ ಕಡಿಮೆಯಾಗಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ, ತಕ್ಷಣವೇ ನಿಯೋಜನೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಶಿಕ್ಷಕರು, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳು ಎಂಬ ಭಾವನೆ ಇಟ್ಟುಕೊಂಡು ಪಾಠ ಮಾಡಿ. ಕನ್ನಡದಲ್ಲೇ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಮಕ್ಕಳಿಗೆ ನಾವು ಯಾವ ರೀತಿ ಶಿಕ್ಷಣ ನೀಡುತ್ತಿದ್ದೇವೆಂದು ಚಿಂತಿಸಬೇಕಾಗುತ್ತದೆ. ಕಡಿಮೆ ಹಾಜರಾತಿ ಹೊಂದಿರುವ ಮಕ್ಕಳಿಗೆ ಸಂಬಂಧಿಸಿದಂತೆ ಅವರು ಪಾಲಕರೊಂದಿಗೆ ಸಭೆ ನಡೆಸಬೇಕು. ಈ ಮೂಲಜ ಮಕ್ಕಳು ತಪ್ಪದೇ ಶಾಲೆಗೆ ಬರುವಂತೆ ಮಾಡಿ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ನೀಡದ್ದಿದ್ದರೆ, ಸಾರ್ವಜನಿಕರಿಗೆ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಉಳಿಯುವುದಿಲ್ಲ. ಪಡೆಯುತ್ತಿರುವ ವೇತನಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ತಿಳಿ ಹೇಳಿದರು.
ಈ ಬಾರಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳು ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಶಾಲೆಯಲ್ಲಿ ವಿಶೇಷ ತರಗತಿ ನಡೆಯುತ್ತಿರುವ ಹಾಗೂ ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮಳವಳ್ಳಿ ತಾಲೂಕು ಕಿರುಗಾವಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ 59 ಮಕ್ಕಳ ಪೈಕಿ 6 ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಶಾಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದತ್ತು ಪಡೆದು ಫಲಿತಾಂಶ ಉತ್ತಮಪಡಿಸಬೇಕು ಎಂದು ಸೂಚಿಸಿದರು. ಈ ವೇಳೆ ಮುಖ್ಯಶಿಕ್ಷಕ ಪ್ರತಿಕ್ರಿಯಿಸಿ, ಶಾಲೆಗೆ ಬಾರದೆ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೆಂದು ಮಾಹಿತಿ ನೀಡಿದರು. ಡಿಸಿ ಪ್ರತಿಕ್ರಿಯಿಸಿ. ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವವರ ವಿರುದ್ಧ ಬಾಲ ಕಾರ್ಮಿಕ ಕಾಯ್ದೆಯಡಿ ದೂರು ದಾಖಲು ಮಾಡಿ. ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುತ್ತಾರೆ ಹಾಜರಾತಿ ಇಲ್ಲ ಎಂಬುವ ಕಾರಣ ಬರಬಾರದು ಎಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕೆಲ ಶಾಲೆಯ ಫಲಿತಾಂಶ ನೋಡಿದರೆ ಶಿಕ್ಷಕರು ಹಾಗೂ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಸಂಖ್ಯೆಯ ಪರಿಪಾತ 1:4 ಇದೆ. ಇದರ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ನಡೆಯುವ ಛಾಯಾಚಿತ್ರಗಳನ್ನು ಪ್ರತಿನಿತ್ಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನೋಡೆಲ್ ಅಧಿಕಾರಿಗಳು ಕಡ್ಡಾಯವಾಗಿ ಹಾಕಬೇಕು ಎಂದರು.
ಡಯಟ್ ಉಪನ್ಯಾಸಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿರುವ ಶಾಲೆಗೆ ಭೇಟಿ ನೀಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಯಾವ ರೀತಿ ಪಾಠ ಮಾಡಬೇಕು ಎಂದು ಆಯಾ ಶಾಲಾ ಶಿಕ್ಷಕರು ತಿಳಿಸಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು. ವಿದ್ಯಾರ್ಥಿವಾರು ಅವರಿಗೆ ಕಷ್ಟವಿರುವ ಹಾಗೂ ಹಿಂದುಳಿದಿರುವ ವಿಷಯದ ಬಗ್ಗೆ ಪಟ್ಟಿ ಮಾಡಿಕೊಂಡು ವಿಶೇಷ ತರಗತಿ ಹಾಗೂ ಪರೀಕ್ಷೆ ನಡೆಸಿ ಅವರನ್ನು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಸಿದ್ಧಮಾಡಬೇಕು ಎಂದು ಸಲಹೆ ನೀಡಿದರು.
ಆಶಾಕಿರಣ ಯೋಜನೆಯಡಿ ದೃಷ್ಟಿ ದೋಷವೊರುವವರಿಗೆ ಆರೋಗ್ಯ ಇಲಾಖೆಯಿಂದ ಉತ್ತಮ ಗುಣಮಟ್ಟದ ಕನ್ನಡಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಆದ್ದರಿಂದ ದೃಷ್ಟಿ ದೋಷವಿರುವ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕವನ್ನು ಪಡೆಯಲು ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಡಯಟ್ ಪ್ರಾಂಶುಪಾಲ ಪುರುಷೋತ್ತಮ್ ಇದ್ದರು.