ಲಘು ಕಥೆಗಳದ್ದು ಒಂದು ಬಗೆಯ ಪರಂಪರೆ

Short stories are a kind of heritage.
ವಿಜಯಪುರದ ಟ್ರೇಝರಿ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಡಾ. ಎಸ್.ಟಿ. ಮೇರವಾಡೆ ಉದ್ಘಾಟಿಸಿದರು. ಸಿದ್ದು ಯರನಾಳ, ಬಿ.ಆರ್. ಬನ್ಸೋಡೆ, ದಾಕ್ಷಾಯಿಣಿ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಮತ್ತು ದೃಷ್ಟಾಂತ ಕಥೆಗಳಂತೆ ಲಘು ಕಥೆಗಳು ಸಹ ಒಂದು ಬಗೆಯ ಕಥಾ ಪರಂಪರೆಯಾಗಿವೆ ಎಂದು ಚಾಣಕ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಟಿ. ಮೇರವಾಡೆ ಹೇಳಿದರು.

ನಗರದ ಟ್ರೇಝರಿ ಕಾಲನಿಯಲ್ಲಿ ಓದುಗರ ಚಾವಡಿ, ರಾಜೇಂದ್ರ ಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಘು ಕಥೆಗಳು ಒಂದು ಬಗೆಯ ಕಾಲ್ಪನಿಕ ಬರವಣಿಗೆಯಾಗಿದ್ದರೂ ವಾಸ್ತವಿಕ ನೆಲೆಯ ಜೀವನಾನುಭವದ ರಸಗಟ್ಟಿತನವನ್ನೇ ನಿರ್ಮಿಸುತ್ತವೆ ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿದ್ದು ಯರನಾಳ ಡಾ. ಎಸ್.ಟಿ. ಮೇರವಾಡೆ ಅವರ ನೂರೊಂದು ಲಘು ಕಥೆಗಳು ಪುಸ್ತಕ ಪರಿಚಯಿಸಿ, ಪ್ರತಿಯೊಂದು ಕಥೆಯು ಆಧುನಿಕ ಜೀವನದ ಚಟುವಟಿಕೆಯೊಂದಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಇತಿಹಾಸ ಮತ್ತು ಜೀವನ ಮೌಲ್ಯಗಳನ್ನು ಹೊಂದಿವೆ. ಸಾಮಾನ್ಯವಾಗಿ ಸಣ್ಣ ಕಥೆಗಳು ಕೆಲವೇ ಘಟನೆಗಳನ್ನು ಒಳಗೊಂಡಿರುತ್ತವೆ. ಇತ್ತೀಚಿನ ಆಧುನಿಕ ದಿನಮಾನದಲ್ಲಿ, ಸಣ್ಣ ಕಥೆಗಳ ಜನಪ್ರಿಯತೆಯಿಂದ ಉತ್ತೇಜಿಸಲ್ಪಟ್ಟಿವೆ. ಹೆಚ್ಚು ಜನರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಪ್ರವೇಶ ಪಡೆದ ನಂತರ ಸಣ್ಣ ಕಥೆಗಳಿಗೆ ಉತ್ತೇಜನ ಬಂದಿರುವುದು ಕಾಣುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಾವಡಿ ಬಳಗದ ಗೌರವ ಅಧ್ಯಕ್ಷ ಬಿ.ಆರ್. ಬನ್ಸೋಡೆ ಮಾತನಾಡಿ, ಸದ್ಯದ ಸಾಮಾಜಿಕ ಜಾಲತಾಣದ ದಿನದಲ್ಲಿ ಇಂಟರ್ನೆಟ್ ನಮ್ಮ ಬೆರಳ ತುದಿಯಲ್ಲಿದ್ದು, ಎಲ್ಲ ರೀತಿಯ ಮನರಂಜನೆಯನ್ನು ಒದಗಿಸಿದೆ. ಈ ಸಮಯದಲ್ಲಿ, ಆಧುನಿಕ ಓದುಗರು ಸಣ್ಣ ಕಥೆಗಳಲ್ಲಿ ತಮ್ಮ ಆಸಕ್ತಿಯನ್ನು ಪುನರುಜ್ಜೀವನಗೊಳಿಸುತ್ತಿರುವುದುನ್ನು ಕಾಣುತ್ತೇವೆ ಎಂದರು.

ಹಂಪಿ ವಿವಿಯಿಂದ ಪಿಎಚ್.ಡಿ. ಪದವಿ ಪಡೆದ ಬಳಗದ ಸದಸ್ಯ ಸುಭಾಷಚಂದ್ರ ಕನ್ನೂರ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದಾಕ್ಷಾಯಿಣಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಚಾವಡಿ ಅಧ್ಯಕ್ಷ ಶರಣು ಸಬರದ, ಬಳಗದ ಸದಸ್ಯರಾದ ಡಾ. ರಾಜಕುಮಾರ ಜೊಳ್ಳಿ, ಬಸವರಾಜ ಕುಂಬಾರ, ಮೋಹನ ಕಟ್ಟಿಮನಿ, ಡಾ. ಎಂ.ಎಸ್. ಮಾಗಣಗೇರಿ, ಶರಣಗೌಡ ಪಾಟೀಲ, ಯು.ಎನ್. ಕುಂಟೋಜಿ, ಮುಸ್ತಾಕ್ ಮಲಗಾಣ, ಪ್ರೊ. ಶಶಿಧರ ಶಿರಹಟ್ಟಿ, ಮಂಜುನಾಥ ಜನಗೊಂಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net