ಹಾಲು, ಪತ್ರಿಕಾ ವಿತರಕರಿಗೂ ಕಿರು ಸಾಲ ಸೌಲಭ್ಯ

PM SWVANIDHI
Published on

ಬ್ಯಾಡಗಿ: ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಪಿ.ಎಂ. ಸ್ವನಿಧಿ ಯೋಜನೆಯಲ್ಲಿ ಹಾಲು ಹಾಗೂ ಪತ್ರಿಕಾ ವಿತರಕರು ಕಿರು ಸಾಲಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ತಿಳಿಸಿದರು.

ಪುರಸಭೆಯ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ ಪಿ.ಎಂ. ಸ್ವನಿಧಿ ಯೋಜನೆ ಮಾಹಿತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೀದಿಬದಿ ವ್ಯಾಪಾರಸ್ಥರು ಹಾಗೂ ಸಣ್ಣಪುಟ್ಟ ವಹಿವಾಟು ನಡೆಸುವ ಇತ್ಯಾದಿ ಕಾರ್ಯಗಳಲ್ಲಿ ತೊಡಗಿರುವ ಕಾರ್ವಿುಕರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಕಿರುಸಾಲ ಯೋಜನೆ ಜಾರಿಗೆ ತಂದಿದೆ. ಇದರಿಂದ ಪ್ರತಿನಿತ್ಯ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿರುವ ಹಾಲು, ಪತ್ರಿಕೆ ಹಂಚುವ ಅಸಂಘಟಿತ ಕಾರ್ವಿುಕ ವರ್ಗಕ್ಕೆ ಅನುಕೂಲವಾಗಲಿದೆ. ಇದಕ್ಕಾಗಿ ಪುರಸಭೆಯಲ್ಲಿ ಅಭಿಯಾನ ಯೋಜನಾಧಿಕಾರಿಗಳಿದ್ದು, ಎಲ್ಲ ಮಾಹಿತಿ ನೀಡಲಿದ್ದಾರೆ. ಸಂಬಂಧಿಸಿದ ವೃತ್ತಿಬಾಂಧವರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾ ವಿತರಕರ ಒಕ್ಕೂಟದ ತಾಲೂಕಾಧ್ಯಕ್ಷ ವೀರಯ್ಯಸ್ವಾಮಿ ಚೌಕೀಮಠ ಮಾತನಾಡಿ, ಪತ್ರಿಕೆ ಹಂಚುವ ಕಾಯಕ, ಹಾಲು ವಿತರಿಸುವ ಇತ್ಯಾದಿ ಕಾಯಕಗಳಲ್ಲಿ ತೊಡಗಿರುವ ವೃತ್ತಿ ಬಾಂಧವರಿಗೆ ಸರ್ಕಾರದಿಂದ ಸೌಲಭ್ಯ ಇರಲಿಲ್ಲ. ಪ್ರಧಾನ ಮಂತ್ರಿಗಳು ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಿರುಸಾಲ ಯೋಜನೆ ಜಾರಿಗೊಳಿಸಿರುವುದು ಸಂತಸ ತಂದಿದೆ. ಪತ್ರಿಕಾ ವಿತರಣೆ ಮಾಡುವವರು ಅಗತ್ಯದಾಖಲಾತಿ ನೀಡಿ, ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಕೌಶಲ ಅಭಿವೃದ್ಧಿ ನಿಗಮ ಅಭಿಯಾನ ವ್ಯವಸ್ಥಾಪಕ ವಿನಾಯಕ ಬಾಬು, ಪತ್ರಿಕೆ, ಹಾಲು ಹಂಚುವ ವಿತರಕರು ಕಿರುಸಾಲ ಸೌಲಭ್ಯ ಪಡೆಯಲು ಅರ್ಹತೆ, ದಾಖಲೆ, ಆನ್​ಅರ್ಜಿ ಸಲ್ಲಿಕೆ ಇತ್ಯಾದಿ ಮಾಹಿತಿ ನೀಡಿದರು.

ಸಂಯೋಜಕಿ ವಿಜಯಲಕ್ಷ್ಮೀ ಸಣ್ಣಮನಿ, ಮುತ್ತಣ್ಣ ರಾಮಗೊಂಡನಹಳ್ಳಿ, ಮಂಜುನಾಥ ವಾಲಿಶೆಟ್ಟರ, ಕುಮಾರ ಕರ್ಚಡ, ಗೋಣೆಪ್ಪ ಗೋಣೆಮ್ಮನವರ, ನಾಗರಾಜ ಕುಂಬಾರ, ವಿಕಾಸ ಅಗಡಿ, ಎಂ. ಸಂತೋಷ ತೊಪ್ಪಲದ ಕಿರಣ ಶಿಂಧೆ, ದೀಪಾ ಆಣೂರುಶೆಟ್ರ, ಕವಿತಾ ಸಣ್ಣಕ್ಕಿ, ನಂದಾ ರ್ಬಾ, ಗುತ್ತೆವ್ವ ಬೋಳೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net