

ಕಳಸ: ಕಳಸ ಪಟ್ಟಣದಲ್ಲಿ ದಿನೇ ದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇರುವ ಫುಟ್‌ಪಾತ್‌ಗಳು ಅಂಗಡಿ ಮಾಲೀಕರು ಹಾಗೂ ವಾಹನ ಮಾಲೀಕರ ಪಾಲಾಗಿರುವುದರಿಂದ ಪಾದಚಾರಿಗಳು ಇತ್ತ ರಸ್ತೆಯಲ್ಲೂ ಸಂಚರಿಸಲಾಗದೇ ಅತ್ತ ಫುಟ್‌ಪಾತ್ ನಲ್ಲೂ ನಡೆಯಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ.
ಕಳಸಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವುದರಿಂದ ಪಟ್ಟಣದಲ್ಲಿ ವಾಹನ, ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇಲ್ಲಿನ ಕಿರಿದಾದ ರಸ್ತೆ ಹಾಗೂ ಫುಟ್‌ಪಾತ್ ಸಮಸ್ಯೆಯಿಂದ ಪ್ರತಿನಿತ್ಯ ಟ್ರಾಫಿಕ್‌ಜಾಮ್ ಉಂಟಾಗಿ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ.
15 ವರ್ಷಗಳ ಹಿಂದೆ ಕಳಸ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ನಡೆದಿತ್ತು. ಈ ಸಂದರ್ಭದಲ್ಲಿ ಒಂದೆರಡು ಉಳ್ಳವರ ಮನೆಯ ಕಾಪೌಂಡ್ ಉಳಿಸಿದ ಪರಿಣಾಮ ಮತ್ತು ಸರಿಯಾದ ಫುಟ್‌ಪಾತ್ ವ್ಯವಸ್ಥೆ ಮಾಡದಿರುವುದರಿಂದ ಇಂದು ಸಮಸ್ಯೆ ಎದುರಿಸುವಂತಾಗಿದೆ. ಅಂದೇ ಸರಿಯಾಗಿ ರಸ್ತೆ ಅಗಲೀಕರಣವಾಗಿದ್ದರೆ ಈ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತಿತ್ತು.
ಕಳಸ ಮುಖ್ಯರಸ್ತೆಯ ಎರಡೂ ಅಂಚಿನಲ್ಲಿ ಫುಟ್‌ಪಾತ್ ಮಾಡಲಾಗಿದೆ. ಆದರೆ ಪ್ರಾರಂಭದಲ್ಲಿ ಸರಿಯಾದ ಕ್ರಮದಲ್ಲಿ ಫುಟ್‌ಪಾತ್ ಮಾಡದಿರುವುದರಿಂದ ದಿನ ನಿತ್ಯ ಹಾಸುಗಲ್ಲುಗಳು ಮುರಿದು ಬೀಳುತ್ತಿವೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಇದರಲ್ಲಿ ಓಡಾಡುವುದೇ ಕಷ್ಟದಾಯಕವಾಗಿದೆ. ಫುಟ್‌ಪಾತ್ ವ್ಯವಸ್ಥೆಯಿಂದ ಸಾಕಷ್ಟು ಜನರು ಬಿದ್ದು ಗಾಯಗೊಂಡಿದ್ದಾರೆ. ಫುಟ್‌ಪಾತ್ ಅಂಚಿನಲ್ಲಿರುವ ಕೆಲವು ಅಂಗಡಿಗಳು ತಮ್ಮ ಅಂಗಡಿ ಸಾಮಾನುಗಳನ್ನು, ತರಕಾರಿ ಮಾರಾಟಗಾರರು ತರಕಾರಿಗಳನ್ನು ಫುಟ್‌ಪಾತ್‌ನಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವು ವಾಹನ ಮಾಲೀಕರು ಫುಟ್‌ಪಾತ್ ಜಾಗದಲ್ಲಿ ವಾಹನ ನಿಲ್ಲಿಸುವುದರಿಂದ ಪಾದಚಾರಿಗಳು ರಸ್ತೆಯನ್ನೇ ಆಶ್ರಯಿಸುವಂತಾಗಿದೆ.