ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

h28-Market 1
Published on

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಸೋಮವಾರವೂ ಖರೀದಿ ಭರಾಟೆ ಜೋರಾಗಿತ್ತು.

ಇಲ್ಲಿಯ ದುರ್ಗದಬೈಲ್, ಕೊಪ್ಪಿಕರ ರಸ್ತೆ, ದಾಜಿಬಾನ್‌ಪೇಟೆ, ಮರಾಠಗಲ್ಲಿ, ಜನತಾ ಬಜಾರ್ ಮಾರ್ಕೆಟ್‌ಗೆ ಸಂಜೆ ಜನಸಾಗರವೇ ಹರಿದು ಬರುತ್ತಿದೆ. ಹೂವು, ಹಣ್ಣು, ಹಣತೆ ಹಾಗೂ ಆಕಾಶ ಬುಟ್ಟಿ ಬೆಲೆಗಳು ಗಗನಕ್ಕೇರಿವೆ. ಆದರೂ ಕುಟುಂಬ ಸಮೇತ ಬಂದು ಜನರು ಬಟ್ಟೆ, ಹಣತೆ, ಆಕಾಶಬುಟ್ಟಿ ಇತರ ವಸ್ತುಗಳ ಖರೀದಿಯಲ್ಲಿ ತೊಡಗುತ್ತಿದೆ.

ಪಟಾಕಿ, ಬಗೆ ಬಗೆಯ ಹಣತೆ, ಆಕಾಶಬುಟ್ಟಿ, ಕೃತಕ ಹಾಗೂ ನೈಸರ್ಗಿಕ ಹೂವಿ ಹಾರಗಳು, ಬಾಳೆದಿಂಡು, ಸ್ವಯಂ ಚಾಲಿತ ವರ್ಣಮಯ ವಿದ್ಯುದ್ದೀಪಗಳ ಸರಗಳನ್ನು ಜನರು ಖರೀದಿ ಮಾಡುತ್ತಿದ್ದಾರೆ.

ವಿವಿಧ ಗಾತ್ರದ, ಚೆಂದದ ಒಂದು ಹಣತೆಗೆ 10ರೂ.ನಿಂದ 50ರೂ.ವರೆಗೆ ಬೆಲೆ ಇದೆ. ಆಕಾಶಬುಟ್ಟಿಗಳ ಬೆಲೆ 100 ರೂ.ನಿಂದ ಆರಂಭವಾಗಿ 15,000 ರೂ.ವರೆಗೆ ಇದೆ. ಸ್ಟಾರ್, ತುಳಸಿಕಟ್ಟಿ, ಬಿದಿರು, ಬಟ್ಟೆಗಳ ಆಕಾಶಬುಟ್ಟಿಗಳು ಮಾರಾಟವಾಗುತ್ತಿವೆ. ಲೈಟಿಂಗ್ ಹಣತೆಗಳೂ ಇವೆ.

ಅಲಂಕಾರಿಕ ಸಾಮಗ್ರಿಗಳ ಬೆಲೆಯೂ ಏರುಮುಖ ಕಂಡಿದೆ. ಹೂವುಗಳ ಬೆಲೆಯೂ ಗಗನಮುಖಿಯಾಗಿವೆ. ಒಂದು ಮಾರು ಲೆಕ್ಕದಲ್ಲಿ ಸೇವಂತಿ 60ರೂ., ಕನಕಾಂಬರಿ 60 ರೂ., 40 ರೂ. ಮಲ್ಲಿಗೆ, ಚೆಂಡು ಹೂವು 60 ರೂ. ಬೆಲೆ ಇದೆ. ಒಂದು ಕಮಲದ ಹೂವಿಗೆ 60 ರೂ., ಗುಲಾಬಿಗೆ 20 ರೂ. ದರವಿದೆ. ಹಣ್ಣುಗಳ ಬೆಲೆಯೂ ಆಕಾಶಬುಟ್ಟಿಯಂತೆ ದರಗಳು ಹೆಚ್ಚಿವೆ. ಕೆಜಿ ಸೇಬಿಗೆ 220 ರೂ., ಮೋಸಂಬಿ 120 ರೂ., ಕರಿದ್ರಾಕ್ಷಿ 160 ರೂ., ದಾಳಿಂಬೆ 150 ರೂ., ಸೀತಾಫಲ 120 ರೂ., ಚಿಕೂ 80 ರೂ., ರೆಡ್ ಪೇರಲಾ 100ರೂ., ಏಲಕ್ಕಿ ಬಾಳೆಗೆ 100 ರೂ. ಇದೆ. ದೊಡ್ಡ ಬಾಳೆ ಹಣ್ಣು ಡಜನ್‌ಗೆ 60 ರೂ. ಇದೆ. ಜೋಡಿ ಕಬ್ಬು, ಬಾಳೆ ದಿಂಡಿಗೆ ತಲಾ 60 ರೂ. ನಿಗದಿಪಡಿಸಿದ್ದಾರೆ ವ್ಯಾಪಾರಸ್ಥರು.

ಪಟಾಕಿ ಖರೀದಿ: ಮಿಂಚಿನ ಬೆಳಕು ಹೊರ ಹೊಮ್ಮಿಸುವ ನಕ್ಷತ್ರ ಕಡ್ಡಿ, ಚಿಕ್ಕವರಿಗಾಗಿ ಢಂ ಢಂ ಎಂದು ಶಬ್ಧ ಮಾಡಿ ವಿಶಿಷ್ಟ ವಾಸನೆಯ ಹೊಗೆ ಹರಡುವ ಪಟಾಕಿ, ಬಳ್ಳೊಳ್ಳಿ ಪಟಾಕಿ ಹೀಗೆ ತರಹೇವಾರಿ ಪರಿಸರ ಪೂರಕ ಪಟಾಕಿಗಳು ಮಾರಾಟವಾಗುತ್ತಿವೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮಾರುಕಟ್ಟೆಗೆ ಆಗಮಿಸಿ ಪಟಾಕಿ ಖರೀದಿಯಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net