

ರಾಯಚೂರು: ದೀಪಾವಳಿ ಹಬ್ಬಕ್ಕೆ ಪೂಜಾ ಸಾಮಗ್ರಿ ಮತ್ತು ಬಟ್ಟೆ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ನಗರದ ಮಾರುಕಟ್ಟೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಗ್ರಿ ಖರೀದಿಗೆ ಸೇರಿದ್ದಾರೆ.
ನಗರದ ಬಂಗಿಕುಂಟಾದಲ್ಲಿ ಹಬ್ಬದ ಪೂಜೆಗಾಗಿ ಹೂವು, ಮಾವಿನ ತೋರಣ, ಬಾಳೆ ದಿಂಡು, ಹಣ್ಣು ಖರೀದಿ ನಡೆಯುತ್ತಿದ್ದು, ಮತ್ತೊಂದೆಡೆ ಹಣತೆ, ಆಕಾಶಬುಟ್ಟಿ ಹಾಗೂ ಪಟಾಕಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಸೇರಿದೆ.
ಪ್ರಮುಖ ರಸ್ತೆಗಳ ಪಕ್ಕದಲ್ಲಿ ಮಣ್ಣಿನಿಂದ ತಯಾರಿಸಿದ ಹಣತೆಗಳ ರಾಶಿಯನ್ನು ಮಾರಾಟಕ್ಕಾಗಿ ಹಾಕಲಾಗಿದ್ದು, ವಿವಿಧ ಆಕಾರದ ಮನ ಸೆಳೆಯುವಂತಹ ಆಕರ್ಷಕ ಹಣೆಗಳನ್ನು ಜನರು ಖರೀದಿಸುತ್ತಿದ್ದಾರೆ. ಅಂಗಡಿ, ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಪೂಜೆಗೆ ಹೆಚ್ಚಿನ ಹೂವು ಖರೀದಿ ನಡೆಯುತ್ತಿದೆ.
ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿರುವ ವಾಲ್ಕಾಟ್ ಮೈದಾನದಲ್ಲಿ ಪಾಲಕರು ಮಕ್ಕಳೊಂದಿಗೆ ಆಗಮಿಸಿ ಪಟಾಕಿ ಖರೀದಿ ನಡೆಸುತ್ತಿದ್ದು, ಹಲವಾರು ನಿರ್ಬಂಧಗಳ ನಡುವೆಯೂ ಪಟಾಕಿ ಮಾರಾಟ ಜೋರಾಗಿ ನಡೆಯುತ್ತಿದೆ. ಎಲ್ಲ ಅಂಗಡಿಗಳ ಮುಂದೆಯೂ ಜನ ಜಂಗುಳಿ ಕಂಡು ಬರುತ್ತಿದೆ.
ಬಟ್ಟೆ ಅಂಗಡಿಗಳಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಆಗಮಿಸುತ್ತಿದ್ದು, ಬಹುತೇಕ ಅಂಗಡಿಗಳು ಜನರಿಂದ ತುಂಬಿವೆ. ಮಹಿಳೆಯರು ಸೀರೆ ಖರೀದಿ ನಡೆಸುತ್ತಿದ್ದಾರೆ. ಒಟ್ಟಾರೆ ದೀಪಾವಳಿಗೆ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯತ್ತಿದೆ.